ಗಮನಿಸಿ: ಕೈಬರಹ ಮತ್ತು ಮುದ್ರಿತ ಪ್ರತಿಗಳನ್ನು ನೋಡಿ ನನ್ನ ತೀರ್ಥರೂಪರಾದ ಕೆ ಜಿ ಭಟ್ಟರು ಮತ್ತು ನಾನು ಬೆರಳಚ್ಚು ಮಾಡಿದ ಪ್ರತಿಯಾಗಿರುವುದರಿಂದ ತಪ್ಪುಗಳು ನುಸುಳಿರುವ ಸಾಧ್ಯತೆಯಿದೆ ಸಹೃದಯರು ಗಮನಿಸಿ ಟಿಪ್ಪಣಿಗಳನ್ನು ಕೊಟ್ಟಲ್ಲಿ ಸರಿಪಡಿಸಿಕೊಳ್ಳುವೆ. ಯಕ್ಷಗಾನಂ ಗೆಲ್ಗೆ.
|| ಶ್ರೀ ಗಣಾಧಿಪತಯೇ ನಮಃ || || ಶ್ರೀ ತ್ರಿಪುರಾಂಬಿಕಾಯೈ ನಮಃ ||
ಬ್ರಹ್ಮಾಂಡ ಪುರಾಣೋಕ್ತ
ಶ್ರೀ ಮಹಾದೇವೀ ಲಲಿತೋಪಾಖ್ಯಾನ
ರಚೈತ: ಕೀರ್ತಿಶೇಷ ಅಗರಿ ಶ್ರೀನಿವಾಸ ಭಾಗವತರು.
ಪಾತ್ರಗಳು
೧. ಈಶ್ವರ
೨. ಪಾರ್ವತಿ
೩. ಗಣಪತಿ
೪. ಗಣಗಳು
೫. ಭಂಡಾಸುರ
೬. ಶುಕ್ರಾಚಾರ್ಯ
೭. ಅಮಿತ್ರಘ್ನ
೮. ಕುಟಿಲಾಕ್ಷ
೯. ದೇವದೂತ
೧೦. ದೇವೇಂದ್ರ
೧೧. ದೇವತೆಗಳು
೧೨. ಶಚಿ
೧೩. ವಿಶುಕ್ರ
೧೪. ವಿಷಂಗ
೧೫. ವಿಷ್ಣು
೧೬. ಮೋಹಿನಿ
೧೭. ಬೃಹಸ್ಪತಿ
೧೮. ಬ್ರಹ್ಮ
೧೯. ಶ್ರೀಲಲಿತೆ
೨೦. ಕಾಮೇಶ್ವರ
೨೧. ನಾರದ
೨೨. ಸಂಪತ್ಕರಿ
೨೩. ಅಶ್ವಾರೂಡೆ
೨೪. ದಂಡನಾಥೆ
೨೫. ಶ್ಯಾಮಲಾಂಬೆ
೨೬. ದುರ್ಮದ
೨೭. ಕುರಂಡ
೨೮. ಕರಂಕ
೨೯. ಜ್ವಾಲಾಮಾಲಿನಿ
೩೦. ಚತುರ್ಬಾಹು
೩೧. ಬಾಲಸರಸ್ವತಿ
೩೨.ಗಜಾನನ
೩೩. ಗಜಾಸುರ
೩೪. ಮಹಿಷಾಸುರ
೩೫. ಚಂಡ -
೩೬. ಮುಂಡ
- ಕಾಳಿ
೩೭. ರಕ್ತಬೀಜ
೩೮. ರಕ್ತೇಶ್ವರಿ
೩೯. ಶುಂಭ
೪೦. ದೇವಿ
೪೧. ರಾವಣ
೪೨. ರಾಮ
೪೩. ಶಿಶುಪಾಲ
೪೪. ಕೃಷ್ಣ
೪೫. ವಿಶ್ವಾಚಿ
೪೬. ಆಲಂಬುಸೆ
೪೭. ನಕುಲೇಶ್ವರಿ
|| ಶಾರ್ದೂಲ ವಿಕ್ರೀಡಿತ ||
ಶ್ರೀ ದೇವಿ ಲಲಿತಾಂಬೆ ದಿವ್ಯ ಚರಿತೇ ಶ್ರೀ ಚಕ್ರ ಮಧ್ಯಸ್ತಿತೇ |
ವೇದಾರಾಧ್ಯೇ ಸಹಸ್ರಭಾನು ಸದೃಶೇ ತ್ರೈನೇತ್ರ ಸಂಶೋಭಿತೇ|
ಬಾಧಾರಿಷ್ಟಗಳಂ ನಿವಾರಿಸುತ ಹೇ | ಶ್ರೀ ರಾಜರಾಜೇಶ್ವರೀ |
ಪಾದದ್ವಂದ್ವಕೆ ಭಕ್ತಿಯಿಂದ ಮಣಿವೆನ್ನಂ ಪಾಲಿಸೌ ಸರ್ವದಾ |
||ಶ್ರೀರಾಗ ||ತ್ರಿವುಡೆ||
ಕುಂಭಸಂಭವ ಲಾಲಿಸಾದಡೆ | ತ್ರ್ಯಂಬಕನು ಕೈಲಾಸ ಶಿಖರದಿ|
ಅಂಬಿಕೆಯನೊಡಗೊಂಡು ಭಕ್ತ ಕು| ಟುಂಬಿಯೆನಿಸಿ |೧|
ಗಣರಕೂಡುತ ಮೆರೆಯೆ ಚಿಂತಾ |
ಮಣಿಮಯದ ವರರಾಜ ಭವನದಿ|
ತನಯ ಗಣಪನ ಸಹಿತ ಪಂಚಾ| ನನನು ಮುದದಿ||೨||
ಒಂದು ದಿನದಲಿ ಬಾಲ ಗಜಮುಖ|
ನೊಂದುಗೂಡುತ ಗಣರ ತಾಮುದ|
ದಿಂದ ಕೈಲಾಸದಲಿ ನಡೆತರೆ| ಚಂದದಿಂದ|| ೩||
ಕಂದುಗೊರಳನ ಫಾಲಲೋಚನ|
ದಿಂದ ದಹಿಸಿದ ಸ್ಮರನ ಭಸ್ಮವ|
ನಂದು ಕಾಣುತ ಗಣರೊಡ| ನೆಂದನಾಗ||೪|| - ಮಾತ್ರಾ ಲೋಪ !
||ಶಂಕರಾಭರಣ ||ಅಷ್ಟ||
ಕಂಡಿರೇ| ಭಸ್ಮರಾಶಿಯನಿದ ನೀವು| ಕಂಡಿರೇ||ಪ||
ಕಂಡಿರೆ ಭಸ್ಮ ರಾಶಿಯನು| ಮುದ|
ಗೊಂಡೆ ನಾನೀಕ್ಷಿಸುತದನು| ಎನ್ನ|
ಪಾಂಡಿತ್ಯವನು ತೋರದಿರೆನು| ಪಿತ|
ರುಂಡಮಾಲನ ಕೃಪೆಯಿಂದೆನುತಾ| ವಕ್ರ|
ತುಂಡನು ಮನದೊಳಾನಂದದಿ ನಲಿಯುತ್ತ||೧||
ಚಿತ್ರ ರಚನೆಯ ಕೌಶಲವ | ದೋರ|
ಲರ್ತಿಯಿಂದೆರೆದು ಸಲಿಲವ| ಗಣ |
ಮೊತ್ತ ವೀಕ್ಷಿಸಲು ಕೌತುಕವ| ಕಲ |
ಸುತ್ತಲೆ ಸೌಂದರ್ಯವೆತ್ತಿಹ ನುಣು| ಪಾದ |
ಮೂರ್ತಿಯ ರಚಿಸಿದ ಚಾತುರ್ಯದಿಂದಲೆ|| ೨ ||
ಬೆರಗಾಗಿ ಸುಂದರಾಕೃತಿಗೆ | ತೋರ್ಪೆ |
ತ್ವರಿತದೊಳೆನ್ನ ಜನನಿಗೆ| ಕಂಡು |
ಹರುಷಗೊಂಬಳು ಮನದೊಳಗೆ| ಎಂದು |
ಕರಿವದನನು ತನ್ನ ಶಿರದಿ ಪೊತ್ತದ | ತಂದು |
ಗಿರಿಜೆಗೆದೋರುತ್ತ ಪುರುಷಾಕೃತಿಯನ್ನು|| ೩ ||
ಪರಿಕಿಸು ತಾಯೆ ಕೌಷಲವ | ನಿನ್ನ |
ತರಳನು ನಾ ರಚಿಸಿರುವ | ವರ |
ಪುರುಷಾಕೃತಿಯಿದರ ಚೆಲುವ| ಅನ |
ವರತ ನಾ ಬಳಿಯಿರಿಸಿಕೊಂಡಾಡುವೆ|
ಹರುಷದೊಳೆನೆ ಪತಿಗೊರೆದಳು ಗಿರಿಜಾತೆ || ೪ ||
|| ನಾಟಿ || ಅಷ್ಟ ||
ಪ್ರಾಣನಾಯಕ ದೇವ| ಮೀನಾಂಕಹರನೆ ಗ |
ಜಾನನ ಸುಕುಮಾರನ | ಜಾಣ ತನವನಿದ ನೀನೋಡು ಕೌತುಕ |
ವೇನೆಂಬೆನೆಲೆರಮಣ || ೧ || ೧೦
ತಳುವದಿತ್ತರೆ ಜೀವ| ಕಳೆಯನ್ನು ಪ್ರತಿಮೆಗೆ | ಎಳೆಯ ಲಂಬೋದರನು ||
ಚೆಲುವನನೊಡಗೊಂಡು ನಲವಿನಿಂದಾಡುತ್ತ | ಕಳೆಯುವ ದಿನಗಳನು || ೨|| ೧೧
ಅಗಜೆಯ ನುಡಿ ಕೇಳಿ ಮೃಗಧರನುಸುರಿದ | ಮಗನ ಸಂತಸಗೊಳಿಸೆ|
ಮೃಗವಿಲೋಚನೆ ಪ್ರತಿಮೆಗೆ ಜೀವವನ್ನೀವ|
ಬಗೆಯ ನೀನದನೀಕ್ಷಿಸೆ || ೩ ||
ಎಂದು ಕೃಪಾದೃಷ್ಟಿಯಿಂದ ಅಮೃತರಸ|
ಕಂದುಕೊರಳ ಸೂಸಿದಾ||
ಅಂದು ಪ್ರತಿಮೆ ಜೀವ| ಪೊಂದಿ ಭರದಿ ನಡೆ|
ತಂದುದೇನೆಂಬೆನದ || ೪ ||
ಕಂದರ್ಪನಾಭಸ್ಮದಿಂದಾದ ಕಾರಣ |
ಸುಂದರಾಂಗವ ತಳೆದು|
ಇಂದುಧರನ ಕೃಪೆಯಿಂದ ಭಾಸ್ಕರ ತೇಜ|
ದಿಂದ ಶೋಭಿಸಿದನಂದು || ೫ || ೧೪
ಪರಮ ಸಾಹಸಿಯನ್ನು ಪರಿಕಿಸಿ ನಂದಿಕೇಶ್ವರ ರುದ್ರ ಮಂತ್ರವನು |
ಕರುಣಿಸುತಿದರಿಂದ | ಹರನಾ ನೀನುತಿಸೆನೆ|
ಹರುಷದೊಳೈತಂದನು || ೬ || ೧೫
ಭಕ್ತಿಭಾವದಿ ನಮಿಸುತ್ತಲೆ ನುತಿಸಿದ|
ಚಿತ್ತಜಾಂತಕನೆ ದೇವ | ಮೃತ್ಯುಂಜಯನೆ ವರ |
ಕೃತ್ತಿವಾಸನೆ ಸ್ವಾಮಿ| ಭಕ್ತಜನರ ಸಂಜೀವ||೭|| ೧೬
ಕಂಡದನಾನಂದಿ ಕೊಂಡಾಡಿದನು ನೆರೆ|
ಭಂಡ್ ಭಂಡ್ ಎನ್ನುತಲೆ ಕೇಳಿ |
ಕಂಡ ಪರಶು ಮುದಗೊಂಡೆಂದನೀತನು | ಭಂಡಾಸುರ ನೆನುತ್ತಲಿ || ೮ || ೧೭
|| ವಾರ್ಧಿಕ ||
ಗಿರಿಜಾತೆ ಹರುಷದಲಿ ಕರೆದು ಲಂಬೋದರನ|
ತರಳ ಭಂಡಾಸುರನ ನಿರತ ನೀನೊಡಗೊಂಡು|
ನೆರೆದಾಟ ಪಾಠಗಳೊಳೆರಕವಾಗಿಹುದೆನುತ ಒರೆಯಲದ ಕೇಳಿ ಮುದದಿ|
ಹರುಷದಿಂ ಹರಗಿರಿಜೆಯರಿಗೆರಗಿ ನಡೆತಂದು|
ಎರಕವಾಗಿರೆ ನಿತ್ಯಭೋಜನದೊಳು ವಿ|
ಹರಣ ಕ್ರೀಡನದಿ ಸಹ ಧರೆಗೆ ನೂತನವೆಂಬ ತೆರದಿಂದ ಮೆರೆದೀರ್ದರು || ೧|| ೧೮
|| ಸುರುಟಿ || ಏಕ ||
ಅರ್ತಿಯೊಳವರಿರಲು | ತ್ರಿದಶರ | ಮೊತ್ತ ಪ್ರದೋಶದೊಳು ||
ಕೃತ್ತಿವಾಸನನು ಭಕ್ತಿಯಿಂದ ನುತಿ| ಸುತ್ತಿರಲದ ಕಾಣುತ್ತ ಕೈಲಾಸದಿ || ೧ || ೧೯
ಪರಿಕಿಸಿ ದೂರದಲಿ | ಭಂಡಾ | ಸುರನು ಭ್ರಮೆಯ ತಾಳಿ ||
ಮೆರೆವ ಸಂಪದಕೆ | ಕರೆದಾಕ್ಷಣದಲಿ | ಕರಿವದನದವ | ಗೊರೆದ ಚೋದ್ಯದಲಿ || ೨ ||
ಯಾರೈ ಗಣನಾಥ | ಇದು ಮಿತ್ರರೆ | ಭೂರಿ ಭಾಗ್ಯ ಭರಿತ |
ಈ ರೀತಿಯ ಸಿರಿ| ಸೇರಿತೆಂತಿವರ|
ವಾರಣಾಸ್ಯ ಸು| ವಿಚಾರಿಯೆ ತಿಳುಹೈ|| ೩ || ೨೧
ಲಾಲಿಪುದೆನ್ನ ಸಖ| ತ್ರಿಜಗದಿ | ಮೇಲೆನಿಸಿಹ ನಾಕ ||
ಪಾಲಕರೈ ಫಣಿಮಾಲನು ಸ್ವರ್ಗವ | ಪಾಲಿಸಿಹನು ಕರು|
ಣಾಳು ತ್ರಿದಶರಿಗೆ || ೪ || ೨೨
ನಿಶ್ಚಲ ತಪಗೈದು | ಹರನನು | ಮೆಚ್ಚಿಸುತಲೆ ಪಡೆದು ||
ಉಚ್ಛ ಪದವಿಯಲಿ ಸಚ್ಚರಿತರಿಹರು | ನಿಶ್ಚಯವಿದು ತಪ | ಕಲ್ಪವೃಕ್ಷವೈ || ೫ ||
|| ಮಧ್ಯಮಾವತಿ || ತ್ರಿವುಡೆ ||
ಕರಿವದನೆಂಬುದನು ಭಂಡಾ | ಸುರನು ಲಾಲಿಸಿ ಮನದಿ ಬಗೆದನು |
ಹರನ ತಪದಲಿ ಮೆಚ್ಚಿಸುವೆ ನಾ| ಹರುಷದಿಂದ || ೧ || ೨೪
ಬಡವನಾಗಿಹೆ ಶಿವನ ವರದಲಿ| ಪಡೆದು ಸಂಪದಗಳನು ಸುಮನಸ|
ರೊಡೆಯನನು ಮಿಗಿಸುವೆ ನ | ನುಜ್ಞೆಯ ಲೊಡು ಗಣೇಶ || ೨ ||
ಲೇಸು ಕಾರ್ಯವು ಸಖನೆ ನಿನಗೆ ಮ | ಹೇಶನೊಲಿಯಲೆನುತ್ತ ಹರಸುತ |
ತೋಷದಲಿ ಕಳುಹಿಸಿದನಾ ವಿಘ್ನೇಶನವನ|| ೨ ||
ಸಾರಿ ಭಂಡಾಸುರನು ಗಂಗಾ | ತೀರದಲಿ ಶುಚಿಯಾಗಿ ಮಿಂದು ಪು |
ರಾರಿಯನು ತಪಿಸುತ್ತಲಿರ್ದನು | ಧೀರನಲ್ಲಿ || ೪ ||
ಉರಿಗೊಳಿಸಿದಗ್ನಿಯಲಿ ತನ್ನಯ|
ಶಿರವನೂರಿದ ತೊರೆದು ವಿಷಯವ |
ನೆರೆಜಪಿಸುತಲೆ ರುದ್ರಮಂತ್ರವ | ಸ್ಥಿರಮನದಲಿ || ೫ ||
ಸರಿದವೈ ಮೂವತ್ತು ಸಾವಿರ |
ವರುಷ ತ್ರೈಜಗ ತಪದಿ ಸುಡುತಿರೆ |
ಹರನು ಮೈದೋರುತ್ತ ಭಂಡಾ | ಸುರನೊಳೆಂದ || ೬ ||
|| ಭೀಂಪಲಾಸ್ || ರೂಪಕ ||
ಧಿರುರೆ ಮೆಚ್ಚಿದೆ ಭಂಡಾ | ಸುರ ಘನ ತಪಕೆ |
ಅಚ್ಚರಿಯಾಂತೆ ಮಗನೆ ನಾ ಮನದಿ ||
ಉರಿಗೊಳುತಿದೆ ಜಗ | ತೊರೆದು ತಪವ ಬೇಗ |
ಅರುಹು ಮನ | ದಿರವ ದಿಟದಿ || ೧ || ೩೦
ಶಂಭು ಸದಾಶಿವ ಕಂಬುಕಂಧರ ದೇವ | ನಂಬಿದ ಭಕ್ತರ ಪೊರೆವ ||
ನೆಂಬ ಬಿರುದು ನಿನ | ಗೆಂಬುದ ಬಲ್ಲೆ ತ್ರಿ| ಯಂಬಕ ಕೇಳು ಬಿನ್ನಪವಾ || ೨ ||
ಸುರನರೋರಗರ ಸಂ | ಗರದಿ ಗೆಲುವ ಶಕ್ತಿ|
ಧುರಕೆ ನಿಂದವ ನರ್ಧ ಬಲವು || ಬರುವಂತೆನಗೆ ಹರಿಹರ ಕಮಲಜರೆಲ್ಲ|
ರಿರು ವಂತೆನ್ನಾಜ್ಞೆಯಂದದಲಿ || ೩ ||
ಜಿಷ್ಣು ಮುಖ್ಯರನೆಲ್ಲ | ಸೃಷ್ಟಿಗೊಳಿಪ ಶಕ್ತಿ| ಕೊಟ್ಟು ಬ್ರಹ್ಮಾಂಡ ಭೇದಿಸುವ|
ಕಟ್ಟಾಳುತನ ಸಹ ರಕ್ಷಿಸು ನೀಪೊಡ | ಮಟ್ಟೆನ್ನ ದಯದಿ ಸಾಂಬಶಿವ || ೪ ||
ಇತ್ತೆನು ಬೇಡಿದಿಷ್ಟಾರ್ಥಗಳನು ದಾನ | ವೋತ್ತಮ ನಾ ಮುದದಿಂದ ||
ಮೃತ್ಯು ವಿಲ್ಲದೆ ಅರು | ವತ್ತು ಸಾವಿರ ವರುಷ | ಪೃಥ್ವಿಯೊಳ್ ನೀ ಬಾಳುವುದೆಂದ || ೫ || ೩೪
|| ಸೌರಾಷ್ಟ್ರ || ತ್ರಿವುಡೆ ||
ವಿಧುದರನ ವರಗಳನು ಸಾಧಿಸಿ| ಮದವ ತಳೆದನು ದಾನವನು ತ |
ನ್ನಿದುರು ನಿಲುವವರಿಲ್ಲ ತ್ರಿಜಗದಿ | ಕದನದೊಳಗೆ || ೧ || ೩೫
ನುಡಿಯುತೀಪರಿ ಬಂದು ಸಕಲರ|
ನುಡಿದು ಗಜಮುಖನೊಡನೆ ಗಿರಿಜೆಗೆ |
ಪೊಡಮಡುತ ವಿಸ್ತರಿಸಲಾತನು | ಪಡೆದ ವರವಾ || ೨ ||
|| ಕಾಂಬೋಧಿ ||| ರೂಪಕ ||
ಲೇಸಿದು ಮಗನೆ ಭಂಡಾಸುರ |ವರವ ಮ|
ಹೇಶನಿಂದಲೆ ಪಡೆದಿಹುದು||
ದ್ವೇಷಿಸಿದರೆ ಮುಂದೆ ವಾಸವಾದ್ಯರನು ವಿ| ನಾಶ ಸಂಭವಿಸದೆ ಬಿಡದು|| ೧ ||
ದೈತ್ಯರನೇಕರು | ವೆತ್ತ ವರದಿ ಮದೋ| ನ್ಮತ್ತ ರಾಗುತ ಧರ್ಮತೊರೆದು||
ಪೃಥ್ವಿಸುರರ ಪೀಡಿಸುತ್ತ| ದೇವರ್ಕರಿ| ಗಿತ್ತು ಕಷ್ಟವ ಮಡಿದಿಹರು || ೨ ||
ಬಿಟ್ಟು ಕಳೆಯಬೇಕು | ದುಷ್ಟರ ಸಂಗವ | ಥಟ್ಟನೆ ಪಾತಾಳಕೈದಿ |
ಶ್ರೇಷ್ಠನೆನಿಸು ನಿಮ್ಮ| ಪಟ್ಟಣವದನಾಳಿ | ನಿಷ್ಠೆಯಿಂದಖಿಳ ಸಂಭ್ರಮದಿ || ೩||
ಗಿರಿಜೆಯ ನುಡಿ ಕೇಳಿ| ಚರಣಕೆರಗಿ ಭಂಡಾ |ಸುರನು ಹಸಾದವೆಂದೆನುತ ||
ಭರದೊಳನುಜ್ಞೆಯ | ಧರಿಸುತ್ತ ನಡೆತಂದ | ನಿರದೆ ಪಾತಾಳಕೆಂದೆನುತ || ೪ || ೪೦
|| ಕೇದಾರ || ಅಷ್ಟ ||
ಹರನ ಕರುಣದಿಂದ ಮೆರೆಯುತ್ತಲಿಹ | ಬಂಡಾ | ಸುರ ನೆಂಬ ವಾರ್ತೆಯನು ||
ಅರಿತು ಸುಜ್ಞಾನದಿ ಕರೆಸಿದನೆಲ್ಲ | ದೈತ್ಯರನು ಶುಕ್ರಾಚಾರ್ಯನು || ೧ ||
ಉಗ್ರಧನುವ ವಿಜಯನಿಂದ್ರ ಶತ್ರುವು | ಅಮಿ | ತಘ್ನ ವಿದ್ಯುನ್ಮಾಲಿಯು ||
ಉಗ್ರಕರ್ಮನು ಶ್ರುತಿಪಾರಗ | ಕುಟಿಲಾಕ್ಷಾ | ದ್ಯಗ್ರಗಣ್ಯರು ಬಂದರು || ೨ ||
ಗುರುವರ ನಮ್ಮನು ಕರೆಸಿಹ ಕಾರಣ | ಅರುಹಲು ಶೀಘ್ರದಲಿ||
ನೆರವೇರಿಸುವೆನದ ಕರುಣಿಸಾಜ್ಞೆಯನೆನು| ತ್ತೆರಗಿದ ಮಿತ್ರಘ್ನನು || ೩ ||
ನಿಗ್ರಹಿಸುತ ಸುರವರ್ಗದ ಸಹಸದಿ | ಸ್ವರ್ಗವನಾಳುವರೆ | ಆಗ್ರಹಗೊಳುತಿಹೆ ಶೀಘ್ರದಿ|
ಕಳುಹೆಂದು | ಉಗ್ರಧನುವನು ಮಣಿದಾ || ೪ ||
ನಿನ್ನ ಕರುಣವಿರಲಿನ್ನು ಬಗೆಯೆ ಬಿಡುಗಣ್ಣರ ನಾನೆಂದಿಗು | ಉನ್ನತಿಕೆಯನೋಳ್ಪುದೆನ್ನುತ ಕುಟಿಲಾಕ್ಷ |
ತನ್ನ ಶೌರ್ಯವ ಪೇಳಿದ || ೫ ||
|| ಕಾಪಿ || ಏಕ ||
ತಾಳಿ ತಾಳಿರೆಲ್ಲ ದೈತ್ಯರು ಕೇಳಿರೆನ್ನ ಸೊಲ್ಲ || ಭೂಲೋಕದಿ ದಿತಿ |
ಜಾಳಿಯು ಮುಂದಕೆ ಏಳಿಗೆ ಹೊಂದುವ ಕಾಲ ಸಂಭವಿಸಿತು || ೧ || ೪೬
ಭಂಡಾಸುರನೆನು|| ವ ಭಟರೊಳು |
ಗಂಡುಗಲಿಯು ಮೆರೆವಾ || ರಚಿಸಲ |
ಖಂಡವಾದ ತಪವಾ | ಇತ್ತಿಹ |
ಖಂಡಪರಶು ವರವಾ || ತೆರಳುತ||
ಕಂಡಾತನ ಮರೆ | ಗೊಂಡು ದಾನವರ||
ತಂಡವ ಧರೆಯೊಳು ಮುಂದಕೆ ಮೆರೆಸುವ || ೨ ||
ಸೃಷ್ಟಿಸುವಧಿಕಾರ | ವನುಸಹ | ಕೊಟ್ಟಹ ತ್ರಿಪುರಹರ ||
ಹರಿ ಪರ| ಮೇಷ್ಠಿ ಮುಖ್ಯಸುರರ | ಬಗೆಯನು | ಶ್ರೇಷ್ಠ ಸಮರ ಧೀರ |
ಬಿಡದೊ|ಗ್ಗಟ್ಟಿನೊಳೆಲ್ಲವರೊಟ್ಟಾಗುತ್ತಲೆ | ಪಟ್ಟು ಕೀರ್ತಿಯನು | ಶ್ರೇಷ್ಠರೆಂದೆನಿಸುವ || ೨ ||
|| ಸಾಂಗತ್ಯ || ರೂಪಕ ||
ಇಂತು ದೈತ್ಯೇಯರ | ಸಂತೈಸುತಂದು ಧೀ| ಮಂತ ಶುಕ್ರಾಚಾರ್ಯರಿರದೆ ||
ಸಂತಸದಲಿ ಖಳ | ತಿಂತಿಣಿ ಸಹಬರೆ | ತಾಂತಳುಹದೆ ಪಾತಾಳಕ್ಕೆ || ೧ ||
ಕಂಡನವರ ಮುದಗೊಂಡನು ಮನದೊಳು | ದ್ದಂಡ ಪ್ರಣಾಮವಗೈದು ||
ಭಂಡಾಸುರನು ಬೆಸ | ಗೊಂಡ ಶುಕ್ರನಲಿ ನೀ| ಹಿಂಡು ದೈತ್ಯರ ಕೂಡುತಿಂದು || ೨ || ೫೦
ಹರಿತಂದ ಕಾರ್ಯವ | ನೊರೆಯಲೆನ್ನಲಿ ಜೀಯ | ಚರಣ ಸೇವೆಗೆ ಸಿದ್ಧನಿಹೆನು |
ಕರುಣಿಪುದಾಜ್ಞೆಯ | ಕರುಣದೊಳೆನಲಾಗ | ನೊರೆದ ಶುಕ್ರಾಚಾರ್ಯನವನು || ೩ ||
|| ಸುರುಟಿ || ಏಕ ||
ಭಂಡಾಸುರ ಧೀರ | ಸಮರ ಪ್ರ | ಚಂಡ ಕುಲೋದ್ಧಾರ | ದಂಡಧರಾರಿಯ ಕರುಣಾಮೃತವ |
ನುಂಡು ದಾನವರ | ತಂಡವನುಳುಹಿದೆ || ೧ ||
ಮೋದದಿ ಬಾಳಿನ್ನು | ಆಶೀ|ರ್ವಾದಗೈವೆ ನಾನು || ಆದಿತೇಯರುರೆ ಕೆಡಹೀರ್ಪರು |
ಮೇಲಾ | ದ ದಾನವರ ಶೋಣಿತ ಪುರವನು || ೨ ||
ಕಟ್ಟಿಸು ನೀನೀಗ ಘನತರ | ಪಟ್ಟಣವನು ಬೇಗ ||
ಇಷ್ಟದಿ ಪಾಲಿಸು ದೈತ್ಯ ಸಂಕುಲವ | ಸೃಷ್ಟಿ ಮೂರರೊಳ್ | ಶ್ರೇಷ್ಠನೆಂದೆನಿಸು || ೩ ||
ಗುರುವರನಾಜ್ಞೆಯಲಿ | ಭಂಡಾ |
ಸುರನತಿ ಹರುಷದಲಿ ||
ಬರಿಸಿ ಮಯಾಸುರಗೊರೆಯೆ | ವಿ ರಚಿಸಿದ ಮೆರೆವ ಪಟ್ಟಣವ |
ಶೂನ್ಯಕ ಪುರವನು || ೪ || ೫೫
|| ಕಲ್ಯಾಣಿ || ರೂಪಕ ||
ಶುಭ ಮುಹೂರ್ತದಿ ಪಟ್ಟ ಕಟ್ಟಿದ ಭಾರ್ಗವ |
ವಿಭವದಿ ಭಂಡಾಸುರನಿಗೆ |
ಪ್ರಭುವೆಂದು ಮಂತ್ರಪೂರ್ವಕ ಕಲೋಶೋದಕ |
ಅಭಿಶೇಕವನು ಮಾಡಿಬಳಿಕ || ೧ ||
ವನಜಪೀಠನು ಹಿಂದೆ ಕನಕ ಕಶ್ಯ್ಪಗಗಿತ್ತ | ದಿನಕರ ತೇಜದಿ ಮೆರೆವ||
ಅನುಪಮ ಜೀವರತ್ನದ ಮಕುಟವ | ದಾನವನ ಶಿರಕಿಟ್ಟನಾಚಾರ್ಯ|| ೨ || ೫೭
ಅರಿಗಳಾ ಶರವ ಹತ್ತಿ ಸೋಕಗೊಡದಿರ್ಪ | ಗುರುತರ ಛತ್ರವ ಧನುವ |
ಶರಗಳ ವರಹಿಮ | ಕರನಂತೆ ಮೆರೆವ ಚಾ | ಮರ ಬ್ರಹ್ಮ ನಿರ್ಮಿತಗಳನು || ೩ ||
ಅಕ್ಷಯ ಮಹಿಮೆಯ ಸಿಂಹಾಸನದಿ | ಚಕ್ಷು ತೇಜದಿ ದೈತ್ಯ ಮೆರೆದ |
ಶುಕ್ರಾಚಾರ್ಯನ ಮತದಿಂದಲಾತಗೆ ಕುಟಿಲಾಕ್ಷ ಸೇನಾಪತಿಯಾದ || ೪ ||
ಅಷ್ಟಪ್ರಧಾನರು ಮಿತ್ರಘ್ನಾದ್ಯರು ನೆರೆ | ಕಟ್ಟಾಳುಗಳೆನಿಸಿದವರು||
ಒಟ್ಟುಗೂಡಿರ್ದರು | ಕೋಟಿ ಸಂಖ್ಯೆಯಲಿ ನಾ | ನೆಷ್ಟೆಂಬೆ ಖಳನ ವೈಭವವ || ೫ || ೬೦
|| ವಾರ್ಧಿಕ್ಯ ||
ಭಂಡಾಸುರನ ವಾರ್ತೆಯನರಿತು ಮನದಿ ಮುದ |
ಗೊಂಡು ತಾರಕನು ಭಗಿನಿಯರ ನಾಲ್ವರ ಕೂಡಿ|
ಗೊಂಡು ನಡೆತಂದು ಸನ್ಮೋಹಿನಿ ಚಿತ್ರಾಂಗಿ ಸುಂದರಿಯ ಕುಮೋದ್ಕರ |
ಪುಂಡರೀಕಾಕ್ಷಿಯರ ಧಾರೆಯನೆರೆದಿತ್ತ ಖಂಡ|
ಭೂಮಂಡಲಗಳಲಿ ತನ್ನ ಹದಿನೆಂಟು ಬ್ರ|
ಹ್ಮಾಂಡಗಳ ವರದಕ್ಷಿಣೆಯ ಸಹಿತ ಮನ್ನಿಸುತ ಸಕಲರಂ ಬೀಳ್ಗೊಂಡನು || ೧ ||
|| ಕಾಂಬೋಧಿ || ಝಂಪೆ ||
ತಿಳುಹಿದನು ನೀತಿಗಳ | ಬಳಿಕ ಶುಕ್ರಾಚಾರ್ಯ |
ನೊಲಿದು ದಾನವ ತಿಲಕ ಕೇಳು ||
ಇಳೆಯಲಿ ಸದಾಚಾರಗಳಲಿ ಸತ್ಕೀರ್ತಿಯನು| ತಳೆ ದರದು ಮೇಲೆನಿಪ ಬಾಳು|| ೧ ||
ನಿತ್ಯದಲಿ ಶಿವಪೂಜೆ | ಮತ್ತೆ ವೇದಾಧ್ಯಯನ | ಮೃತ್ಯುಹರನುಪದೇಶವಿತ್ತ |
ಶಾಸ್ತ್ರಾನುಸಾರ ಅನುವರ್ತಿ | ಸುತ ಬಿಡದಗ್ನಿ | ಹೋತ್ರಾದಿಗಳನು ನಡೆಸುತ್ತ || ೨ ||
ಯಾಗಾದಿಗಳ ಹವಿರ್ಭಾಗಗಳ ನೀವುದನು | ರಾಗದಿಂ ದೇವತೆಗಳಿಂಗೆ ||
ನೀಗದೆ ಸದಾಚಾರ ನಾರಿಯರ ಮೋಹಕೊಳ | ಗಾಗಿ ಕೆಡದಿಹುದು ಧರ್ಮದಲಿ || ೩ ||
ಕರ್ಮಕಾಂಡ ಜ್ಞಾನಕಾಂಡ ಚಿಂತನೆಯ | ನಿರ್ಮಲ ಮನದಿ ಮಾಡಿ ಜಗದಿ ||
ಧರ್ಮಾತ್ಮನೆಂದೆನಿಸೆ | ತ್ರೈಮೂರ್ತಿಗಳಿಗೆ ಸಲ| ನಿಮ್ಮ ಗೆಲಲರಿದು ಸಂಗರದಿ || ೪ || ೬೫
|| ಭಾಮಿನಿ ||
ದೈತ್ಯರೆಲ್ಲರು ಮೀರದಿರ್ದರು |
ಸತ್ಯ ಧರ್ಮಗಳನ್ನು ಗುರುವರ|
ನಿತ್ತ ನೇಮದ ತೆರದಿ ನಡೆತರೆ ಶೂನ್ಯಕಾಪುರವು ||
ಸತ್ವದಲಿ ಶೋಭಿಸಿತು ಮೆರೆವ ಸ|
ವಿತ್ರ ಋಷ್ಯಾಶ್ರಮದ ತೆರದಲಿ |
ದೈತ್ಯಸಂಕುಲ ಬಂದು ಬೋಧಿಸುತಿರ್ದರಡಿಗಡಿಗೆ || ೧ ||
|| ಬಿಲಹರಿ || ಅಷ್ಟ ||
ಕೇಳು ಭಂಡಾಸುರ ನುಡಿಯ | ಸುವಿ | ಶಾಲ ಕೀರ್ತಿಯುತ ದಾನವ ಕುಲವರ್ಯ |
ಗೋಳಿಡುತಿರ್ದ ದಿತಿಜಕುಲ | ದೇಳಿಗೆಯಾಯ್ತು ನಿನ್ನಿಂದ ನಮ್ಮವರ || ೧ ||
ಆದಿಯೊಳ್ ರಕ್ಷಿಪೆವೆನುತ | ಪೇಳಲಾ ದಯಾನಿಧಿ ಬೊಮ್ಮ|
ನಮಗೊಲಿದಿತ್ತ | ಮೇಧಿನಿಗಳ ದೊರೆತನವ | ಬಳಿ | ಕಾದುದು ಪೆಸರು ರಾಕ್ಷಸರು ನಾವೆನುವ || ೨ ||
ಮೆರೆದಿರೆ ದೈತ್ಯೇಯರಿಂತು | ತ್ರಿದ | ಶರ ಪಕ್ಷದಲಿ ಕಪಟಿಗ ಹರಿನಿಂದು |
ಸುರ ರಿಗಿತ್ತನು ನಾಕವನ್ನು | ನಮ್ಮ | ವರಿಗೆ ಮೋಸಮಾಡಿ ಪೇಳ್ವುದೇನನದನು || ೩ ||
ಕಡಲ ಕಡೆದಡಮೃತವನು | ಉಣ | ಬಡಿಸಿ ವಂಚಿಸಿಯಾತುದಾನವರನು |
ಬಿಡು ಗಣ್ಣರಿಗೆ ದೈತ್ಯಕುಲವ | ನಾಶ | ಪಡಿಸಿ ಕಪಟದಿ ಗರ್ವದಿ ಹರಿಮೆರೆವ || ೪ || ೭೦
ಪರಿಪೂರ್ಣ ಪ್ರಬಲರಾಗಿರಲು | ನಾವು | ಸುರರ ಬಡಿದು ನಾಕವನ್ನಾಳದಿರಲು |
ಕೊರತೆ ನಮಗೆ || ಪಿತೃಋಣವ | ಪರಿ | ಹರಿಸಲು ಗೆಲಿದು ಸ್ವರ್ಗವ ವಶಗೈವ || ೧ ||
|| ಭೈರವಿ || ಅಷ್ಟ ||
ದೈತ್ಯರ ನುಡಿಗಳನು | ಲಾಲಿಸಿ ಖತಿ | ವೆತ್ತು ಭಂಡಾಸುರನು ||
ವ್ಯರ್ಥಬಿಡೆನು ಸುರ | ಮೊತ್ತವನಾ ಸವ| ರುತ್ತ ನಾಕವ ನಾಳ್ಪೆನು || ೧ ||
ಅದ್ಭುತ ವಿಕ್ರಮರ ನೆರಹಿಗೊಂಡು| ಯುದ್ಧದಿ ಭೂಭುಜರ | |
ಗೆದ್ದು ಕಿಂಪುರುಷ ಖಂಡವ ದಾಟಿ ಬಂದ| ಸಮುದ್ರ ಘೋಷದಲಿ ಧೀರ || ೨ ||
ಹರಿವರ್ಷ ಖಂಡದೊಳು | ಬೀಡನು ಬಿಟ್ಟಿ | ರುವವರ ಮರ್ದಿಸಲು ||
ತರಹರಗೊಳುತಲಿ ಚರರೆಲ್ಲ ನಡೆತಂದು | ಒರೆದರು ಸುರಪನೊಳು |
|| ಮಾರವಿ ಏಕ ||
ಭಂಡಾಸುರ ನುಪಹತಿಯ ಕೇಳಿ ಖತಿ| ಗೊಂಡು ಪುರಂದರನು ||
ಹಿಂಡುವೆ ದೈತ್ಯರ ತಂಡವ ನೊಡ| ಗೊಂಡು ಸುಮನಸರನು || ೧ ||
ಮುತ್ತಿದ ದೈತ್ಯರ ಮೊತ್ತವ ತಲೆ | ಸವರುತ್ತಲೆ ನಡೆತರಲು |
ದೈತ್ಯ ಭಂಡ ಖತಿವೆತ್ತು ತಡೆಯೆ ಕಾ | ಣುತ್ತೆಂದನವನೊಳು || ೨ ||
ದುರುಳನ್ಯಾರು ಹರಿವರ್ಷ ಖಂಡಕೈ ತರುತಲೆ ನಮ್ಮವರ ||
ಪರಿಪರಿ ಪೀಡಿಸಿ ಪರಿಭವಗೊಳಿಸಿದ | ಪರಿಯೇನು ಸುರದರ || ೩ ||
ವಾಸವ ಕೇಳ್ ಭಂಡಾಸುರ ಸಮರದಿ | ಘಾಸಿಗೈದು ಸುರರ ||
ತೋಷದೊಳಾಳುವನೈಸೆ ನಾಕವನು | ಲೇಸಾಗದು ಸಮರ || ೪ ||
ಮತಿವಿಕಳನೆ ಶತ| ಕ್ರತುಗಳಿಂದ ಸುರಪತಿತನವನು ಪಡೆದೆ |
ದಿತಿಜರು ಮತ್ಸರಿಸುತ ಬಯಸುವದನು | ಚಿತವು | ಸಾರಿ ನುಡಿದೆ || ೫ ||
ಹಕ್ಕಿಯನೇರಿಹ ಠಕ್ಕನು ಕಪಟದಿ | ರಕ್ಷಿಸುವನು ನಿಮ್ಮ |
ರಕ್ಕಸರನು ತರಿದಿಕ್ಕಿಹ ಪೂರ್ವದಿ | ಈಕ್ಷಿಪೆನಾಹಮ್ಮ || ೬ ||
|| ಭಾಮಿನಿ ||
ಸೊಕ್ಕ ತೋರುತ ಉಭಯ ಶರಧಿಗ |
ಳುಕ್ಕಿ ಹೊಐದಾಡುವ ತೆರದಲಿ ಪ|
ರಾಕ್ರಮದಿ ಕಾದಾಡುತ್ತಿರಲು ಸುರಾಸುರರು ಕೂಡಿ |
ಸಿಕ್ಕಲರಿಯದು ಜಯ ಸುರಪಗೆಂ |
ದಾಕ್ಷಣವೆ ನಡೆತಂದು ಕಮಲಜ |
ರಕ್ಕಸರ ಸಂತೈಸಿ ಭಂಡಾಸುರನೊಳಿಂತೆಂದಾ || ೧ || ೮೦
:::::::ಬ್ರಹ್ಮ:::::
|| ಬೇಹಾಗ್ || ಏಕ ||
ದನುಜತಿಲಕ ಭಂಡಾಸುರ ಸೈರಿಸು | ನಿನಗೆಣೆಯೇ ಸುರಸಂಕುಲ |
ರಣ ವಿಕ್ರಮಿ ಬಿನುಗರ ಗೆಲಿದರೆ ಮೇ | ದಿನಿಯೊಳ್ ಕೀರ್ತಿಯು ನಿನಗಿಲ್ಲ|| ೧ || ೮೧
ಫಣಿಭೂಷಣ ನೊಲುಮೆಯ ಪಡೆದಾತನ | ಘನತೆಗೆ ಕುಂದಿದು ಪುಸಿಯಲ್ಲ ||
ಅನಿಮಿಷರಲಿ ಸಂಧಾನವ ಮಾಡಿಕೊ ಸನುಮತ ದಿಂದಾಲಿಸಿ ಸೊಲ್ಲ|| ೨ ||
ಭೂಲೋಕವ ಪಾತಾಳವ ಸಹನೀ | ಪಾಲಿಸುತಿರು ವೈಭವದಿಂದ |
ಆಳುತ ನಾಕವ ನಿನ್ನಾಧೀನದಿ | ಬಾಳಲಿ ನಿರತ ತ್ರಿದಶವೃಂದ || ೩ ||
ಲೀಲೆಯೊಳೀವರು ಕಪ್ಪವ ಬಿಡು ಕ | ಟ್ಟಾಳು ವೈರವನು ತ್ಯಜಿಸೆಂದ ||
ಕೇಳು ನಿನಗೆ ಬೇಕದ ಕರವನೆನೆ | ತಾಳಿ ಮದವ ದಾನವನೊರೆದ || ೪ ||
|| ವಾರ್ಧಿಕ್ಯ ||
ವಾಣಿರಮಣನೆ ನಿನ್ನ ನುಡಿ ಮಾನ್ಯವೆನಗೆ ಗೀ |
ರ್ವಾಣರೀವುದು ನಂದನವನಪ್ಸರೆಯರ ಇಂ |
ದ್ರಾಣಿಯಂ ಸಹಿತ ಕಪ್ಪವ ಬಳಿಕ ಸಂಧಾನಕೊಪ್ಪುವೆನು ನಾನೆನುತಲಿ |
ದಾನವನು ನುಡಿಯೆ ಕಿಡಿಕಿಡಿಯಾಗಿ ಕಮಲಜಂ |
ಏನನಾಡಿದೆ ದುಷ್ಟಮತಿಹೀನ ಮುದದೊಳಿಂ|
ದ್ರಾಣಿಯಂ ಕೇಳುವುದೆ ನಿನ್ನ ಪೆಸರಿಗೆ ತಕ್ಕ ನುಡಿದೆ ಫಡ ತೊಲಗೆಂದನು || ೧ ||
ತಳೆಯಂತರ್ಧಾನವಂ ಕಮಲಸಂಜಾತ |
ಖಳರು ರೋಷದಿ ಮುತ್ತಿ ತ್ರಿದಶರಂ ಸೆರೆವಿಡಿದು|
ಎಳೆದು ತಂದರು ಬಂಧಿಸುತ್ತ ಶೂನ್ಯಕಪುರಕೆ ಬಲವೈರಿ ಮುಖ್ಯರನ್ನು ||
ಬಲುತರದ ಬವಣೆಗಳನಿತ್ತು ಬಂಡಿಗಳನ್ನು |
ಎಳೆಯಿಸಿದರಖಿಳ ಭಾರಗಳನ್ನು ಹೊರಿಸಿದರು |
ಬಳಲುತ್ತ ತ್ರಿದಶರೆಲ್ಲರು ಸೇವಿಸುತ್ತಿರ್ದರಾ ಖಳರನನುದಿನದಲಿ || ೨ || ೮೬
|| ತೋಡಿ || ರೂಪಕ ||
ಇತ್ತ ಪುಲೋಮಜೆ ಯರಿತು ಸಂಗ್ರಾಮದ| ವಾರ್ತೆಯನತಿ ಭೀತಿಯಿಂದ ||
ಧೂರ್ತನೆನ್ನನು ಕೆಡಿಸದೆ ಬಿಡನಿದಕೇನು | ಯತ್ನವೆನುತ ತ್ವರೆಯಿಂದ || ೧ ||
ತಂದೆ ಪುಲೋಮನ ಹೊಂದಿಕೊಳ್ಳುತ ದೈತ್ಯವೃಂದವರಿಯದಂತೆ ಪೊರಟು ||
ಬಂದು ಕೈಲಾಸಕೆ | ಚಂದ್ರಚೂಡನ ಸತಿ| ಗಂದು ಭಯದಿ ಪೊಡಮಟ್ಟು || ೨ ||
ಶರಣಮ್ಮ ತಾಯೆ ಶಂಕರಿ ಪರಮೇಶ್ವರಿ | ಮರೆಗೊಂಡೆ ನಿನ್ನ ಪಾದವನು |
ದುರುಳ ಭಂಡಾಸುರ | ಧುರಕೈದಿ ತ್ರಿದಶರ | ಸೆರೆಪಿಡಿದೊಇದಿಹನವನು || ೩ ||
ಧಡಿಗನವನು ಬಂದು ಕೆಡಿಸದೆ ಬಿಡನು ನಿ | ನ್ನಡಿಗಳ ಮರೆಗೊಂಡೆನಮ್ಮ |
ಮೃಡನರಸಿಯೆ ಮಾನ | ಕೆಡದಂತೆ ರಕ್ಷಿಸು | ಕೊಡುತಭಯವ ತೋರಿ ಪ್ರೇಮ || ೪ || ೯೦
ಎಂದು ನಮಿಸಿ ಭಕ್ತಿಯಿಂದ ಮರುಗುತಿಹ | ಇಂದ್ರಾಣಿಗೀಯುತ್ತ ಲಭಯ |
ಇಂದುಧರನರಾಣಿ | ಎಂದಳು ಮಗಳೆ ನೀ | ನೊಂದೆಯಾ ತಾಳಿಕೋ ಧೈರ್ಯ || ೫ ||
ಮರುಕವ ಬಿಡು ನಿನ್ನ | ಪೊರೆಯುವೆ ಪ್ರೇಮದಿ || ತರುಣಿ ನೀನಿರು ಕೈಲಾಸದಲಿ ||
ದುರುಳರಳಿಯುವರು ದುಷ್ಕರ್ಮ ಫಲದಿಂದ | ನೆರೆನಂಬಿಕೋ ಮನದಲ್ಲಿ || ೬ ||
|| ಕಾಂಬೋಧಿ || ಝಂಪೆ ||
ದುರುಳ ಭಂಡಾಸುರನು ತರುಳಿ ಶಚಿಯನು ಬಯಸಿ| ಮರಳಿ ಬಂದಮರಾವತಿಯೊಳು|
ಅರಸಿಕಾಣದೆ ಸತಿಯ | ನರಿತ ಗಿರಿಜೆಯ ಪದವ | ಮರೆಗೊಂಡ ಹದನವ ಭರದೊಳು || ೧ ||
ಸೇರಿದ ಸುಧರ್ಮ ಸಭೆಯನು ಸಿಂಹವಿಷ್ಟರವ | ನೇರಿದನು | ನೇಮಿಸಿದನಂದು ||
ಘೋರದಾನವರ ದಿಕ್ಪತಿತನಕೆ ರಂಭಾದಿ | ನಾರಿಯರರೊಡಗೂಡಿಗೊಂಡು || ೨ || ೯೪
:::: ವಿಶುಂಗ ವಿಶುಕ್ರ ::::::::::::::
ತಿಕ್ಕಿದನು ಎಡಭುಜವ ಪಕ್ಕನೆ ಪಡೆದನು ವಿ | ಶುಕ್ರಾಸುರನೆನುವ ಭಟನನು||
ದಕ್ಷಿಣ ಭುಜದಿ ಬಳಿಕ ಸೊಕ್ಕಿಹ ವಿಷಂಗನನು| ಆ ಕ್ಷಣದಿ ಸಹಜಾತರನ್ನು || ೩ ||
ಅಣ್ಣ ನೀನೀ ತೆರದೊಳೆನ್ನ ಸೃಜಿಸಲು ಕಾರ್ಯ | ವಿನ್ನೇನಿಹುದು ಪೇಳಲದನು|
ನಿರ್ಣಯದಿ ಪೂರೈಸಿ ನಿನ್ನಾಣೆ ಬಹೆನು ಪೇ | ಳೆನ್ನೊಳೆಂದು ವಿಶುಕ್ರ ನುಡಿದ || ೪ ||
ಜನಿಸುವಾಗಲೆ ವಿದ್ಯೆಗಳಾ ಧೈರ್ಯ ಶೌರ್ಯಗಳ | ಅನುಪಮ ಪರಾಕ್ರಮವ ಸಹಿತ|
ಎನಗಿತ್ತು ಸೃಜಿಸಿರ್ಪ ಕಾರಣವ ಪೇಳೆಂದು | ಮಣಿದೆಂದನವನಲಿ ವಿಶಂಗ || ೫ || ೯೭
ಕೇಳಿ ಸಹಜಾತರಿರ | ಮೂರ್ಲೋಕದೊಡೆತನವು || ಜಾಲವಲ್ಲೆನ್ನ ವಶವಿಹುದು |
ಭೂಲೋಕವ ವಿಶುಕ್ರನಾಳುತಿರಲಿನ್ನು | ಪಾತಾಳವ ವಿಶಂಗ ಪಾಲಿಸುವುದು || ೬ ||
ಹರುಷವಾಇತಣ್ಣ ದೈ | ತ್ಯರ ಕುಲವ ಬೆಳಗಿಸಿದೆ | ಧರೆಯ ಪಾಲಿಸುತಿಹೆನು ನಾನು ||
ಚರಣ ಕಿಂಕರನಾಗಿ ಸುರರ ಲೆಕ್ಕಿಸದೆ ನೀ | ಪರಿಕಿಸೆಂದ ವಿಶುಕ್ರನವನು || ೭ ||
ಅಡಿಗೆರಗುತ ವಿಶುಂಗ ನುಡಿದನಾ ಪಾತಾಳ | ದೊಡೆತನದೊಳಿರ್ಪೆ | ಕೇಳಣ್ಣ|
ಪಡೆದು ನಿನ್ನಾಜ್ಞೆಯನು | ಬಿಡುಗಣ್ಣರಿಂಗೆಡೆಯಗೊಡೆ ನೋಡು ನೀ ಶೌರ್ಯವನ್ನು || ೮ || ೧೦೦
ಎಂದು ಮಣಿದವರ ತಾನಂದು ಪರಸುತ ಕಳುಹು |ತಂದು ವಕ್ಷಸ್ಥಳವ ತಿಕ್ಕಿ |
ಚಂದದಿಂ ಪಡೆದು ಧೂಮಿನಿಯೆನುವ ಭಗಿನಿಯ ಮ | ದಾಂಧ ನಿರ್ದನು ಸಂಭ್ರಮದಲಿ || ೯ || ೧೦೧
|| ಸೌರಾಷ್ಟ್ರ ||ತ್ರಿವುಡೆ||
ಛೇದಿಸುತ ಬ್ರಹ್ಮಾಂಡಗಳ ತಾ | ನೈದಿ ಗೆಲಿದನು ಖಳಬಳಿಕ ನೂ|
ರೈದು ಬ್ರಹ್ಮಾಂಡ ಗಳನವ ವಶ| ಗೈದುದುರುಳ || ೧ ||
ಗೆಲಿದು ತ್ರೈಮೂರ್ತಿ | ಗಳನಂಕೆಯೊ | ಳ್ನಿಲಿಸಿ ಕೊಂಬೆನೆನುತ್ತ ಬಗೆದವ |
ತಳುವದೈತರೆ ಸತ್ಯಲೋಕಕೆ | ತಿಳಿದು ವಿಧಿಯು|| ೨ ||
ಪುರಸಹಿತಲದೃಶ್ಯನಾಗಿರೆ | ಬರಲು ವೈಕುಂಠದಲಿ ಲಕ್ಷ್ಮೀ|
ವರನ ಕಾಣದೆ ವಿಜಯ ವಾಇತೆಂ |ದರಿತು ದೈತ್ಯ || ೩|
ಮುತ್ತಿದರೆ ಕೈಲಾಸವನು ಕಾ| ಣುತ್ತ ಗಜಮುಖ ದಾನವನು ಕಡು |
ಮತ್ತನಾಗಿಹನೆಂದರಿತು ಗಣ | ಮೊತ್ತದೊಡನೆ || ೪ || ೧೦೫
ತಡೆಯದೈತರೆ ಕಂಡು ದಾನವ | ನೊಡನೆ ಕಳುಹೆ ವಿಭೀಷಣನವ|
ನಡೆತರುತ ಗರ್ವದಲಿ ಗಜಮುಖ| ನೊಡನೆ ನುಡಿದ || ೫ ||
|| ಸಾಂಗತ್ಯ || ರೂಪಕ ||
ಕರಿವದನನೆ ಪೋಗಿ | ಭರದಿ ನಿನ್ನಯ್ಯನೋಳರುಹು ದಾನವ ಸಾರ್ವಭೌಮ |
ಹರಿತಂದಿಹನು ಭಂಡಾಸುರ ಧುರಧೀರನ | ,ಮರೆಗೊಳೆ ಪೊರೆಯುವ ನಿಮ್ಮ || ೧ ||
ತರುಣಿ ಶಚಿಯ ತನ್ನ | ಮರೆಯೊಳಿಟ್ಟಿಹಳಂತೆ | ತರವಲ್ಲವಿದು ನೀನು ಪೇಳು ||
ಗಿರಿಜೆ ತಂದೊಪ್ಪಿಸದಿರೆ | ನಾರಿ | ಮಣಿಯ ನೀರ್ವರನೆಳೆದೊಯ್ವೆ ಶೌರ್ಯದೊಳು|| ೨ ||
ಬೆಪ್ಪನೆ ಬರಿದೆ ನಿಂತಿರ್ಪುದೇತಕೆ ನೀ | ನಿನ್ನಪ್ಪನೊಳರುಹದೆಂದೆನಲು |
ಕಪ್ಪುಗೊರಳ ಕುವರ ಕರದಿಂ ಕೆನ್ನೆ | ಗಪ್ಪಳಿಸಿದರೆ ಖಾತಿಯೊಳು || ೩ ||
|| ವಾರ್ಧಿಕ ||
ಕೊರಳು ತುಂಡಾಗಿ ಧರೆಗುರುಳದಂ ದಾನವಂ |
ಪರಿಕಿಸುತ್ತದನು ದೈತ್ಯರು ರೋಷದಿಂ ಮುತ್ತಿ|
ದರೆ ಗಜಾನನನು ಬೊಬ್ಬಿರಿದು ಶಿವಗಣರ ಬಡಿ|
ದುರುಳಿಸಲು ಕಂಡು ಖತಿವೆರಸಿ ಗದೆಯಂ ಖಳನ
ಶಿರಕೆರಗೆ ಗಜವದನ ಧರೆಗೆ ಮೂರ್ಛಿತನಾಗಿ ಅರೆನಿಮಿಷದಲಿ ದೈತ್ಯರು || ೧ ||
ತಿಳಿದು ಮೂರ್ಛೆಯ ಖಾತಿಯಲಿ ಧರಿಸಿದಂಕುಶದಿ|
ನಿಲದೆ ತಿವಿದರೆ ಮೂರ್ಛೆ ತಳೆದ ಲಬೋದರಂ|
ಬಳಿಕ ಪಾರ್ವತಿ ಖಾತಿಯಲಿ ಹೂಂಕರಿಸಿ ಶಕ್ತಿ ಬಲಸಹಿತ ಭರದೊಳೈದಿ|
ಖಳನ ಪಾಶದಿಕಟ್ಟಿ ಕೊಲುವೆನೆಂದಿಹ ವೇಳ್ಯ |
ದಲಿ ಬಂದು ಕಮಲಜಂ |
ನಿಲದೆ ಮಣಿದೆಂದನವ |
ನೆಲೆತಾಯೆ ಕೊಲ್ಲದಿರು ಖಳಾಗೆ ಹರನಿತ್ತ ವರ ತಿಳಿದು ನೋಡದ ಮನದಿ ಖಳನಿವನ ಕಳುಹೆನುತಲಿ || ೨ || ೧೧೦
|| ಭಾಮಿನಿ ||
ಪತಿಯ ವರಗಳ ನೆನೆಯುತಲೆ ಪಾ |
ರ್ವತಿ ನುಡುದಳು ಮದಾಂಧ ಖಳ ದು|
ರ್ಮತಿಯೆ ನಡೆ ಭೂಲೋಕಕೀಕ್ಷಣ ಸೆಯ ಬಿಟ್ಟಿಹೆನು||
ಹಿತದಿ ಮುಂದಕೆ ಬಂದು ನೀ ಪ|
ರ್ವತವ ನಿದನೇರಿದರೆ ತವಶಿರ|
ಕ್ಷಿತಿಗೆ ಬೀಳಲೆನುತ್ತ ಶಪಿಸುತ ದೂಡಿಸಿದಳವನ || ೧ ||
|| ಕಂದ ||
ಕಟ್ಟಿಸಿ ಕೈಕಾಲ್ಗಳನಾ | ದುಷ್ಟನ ಬಿ|ಸಾಡಿಸಲ್ಕೆ ಗಿರಿಯಿಂದಾಗಂ |
ಸೃಷ್ಟಿಗೆ ಬೀಳುತ ನೆರೆ ಕಂ |
ಗೆಟ್ಟಾ ಖಳನೈದಿ ಸೇರಿದನು ನಿಜಪುರಮಂ || ೧ || ೧೧೨
|| ಭೂಪಾಳಿ || ತ್ರಿಪುಟ ||
ಇತ್ತ ವೈಕುಂಠದಲಿ ಶ್ರೀ| ಪುರುಷೋತ್ತಮನು ತಾನರಿತ ಮನದಲಿ |
ದೈತ್ಯ ಭಂಡಾಸುರನು ಬಲು ಮೆರೆ | ಯುತ್ತಲಿಹುದ || ೧ ||
ನಿತ್ಯ ನೈಮಿತ್ತಿಕಗಳನು ನಡೆ| ಸುತ್ತ ಲಿಹನಾಚಾರ್ಯ ಶುಕ್ರನು |
ಇತ್ತ ನೇಮದಿ ವೃದ್ಧಿಯನು ಹೊಂದುತ್ತಲಿಹನು || ೨ ||
ದಾನವನ ಹತಿಯಿಂದ ತ್ರಿದಶರು | ಕ್ಷೀಣಿಸುತ್ತಿಹರಕಟ ದೈತ್ಯನ|
ಹಾನಿಗೊಳಿಸುವ ದೆಂತೆನುತಲಾ | ದಾನವಾರಿ || ೩ || ೧೧೫
ಧರಣಿ ಮೂರನು ಮೋಹಗೊಳಿಸುವ | ತರುಣಿಯೋರ್ವಳ ಸೃಜಿಸಿದನು ಶ್ರೀ|
ಹರಿಯ ಚರಣಕೆ ಮಣಿದು ಮಾನಿನಿ| ಯೊರೆದಳಂದು || ೪ ||
|| ಬೇಹಾಗ್ || ಏಕ ||
ಪರಮ ಪುರುಷ ಮುರಹರದೇವ | ಅವ | ಧರಿಸು ಕರುಣದಲಿ ಬಿನ್ನಪವ || ಪ ||
ಏತಕೆ ಸೃಜಿಸಿದೆ ಈ ತೆರದಲಿ ರೂ | ಪಾತಿಶಯವ ನಿಂದಿತ್ತೆನಗೆ ||
ತಾತನೆ ಕಾರ್ಯವ ನೀತಿಳುಹುವುದು ಕೃ| ಪಾತಿಶಯವ ಬೀರುತಲಿ ಮಿಗೆ || ೧ ||
ಹರಿಣಾಂಬಕಿ ದೈತ್ಯರುಪಟಳದಿ ತರ |
ಹರಿಪುದು ತ್ರೈಜಗವದರಿಂದ||
ತೆರಳುತ ಭಂಡಾಸುರನನು ನೀವಶ|
ಕರಿಸು ಮೋಹದ ಬಲೆಯಿಂದ|| ೨ || ೧೧೮
ನಿತ್ಯನೈಮಿತ್ತಿಕ ಸತ್ಕರ್ಮಗಳನು | ದೈತ್ಯರುಳಿಯುವಂದದಿ ಮಾಡು |
ಚಿತ್ತಕೆಡಿಸಿ ಕ್ಷಣಹೊತ್ತು ನಿನ್ನಗಲದೆ|| ನಿತ್ಯ್ದೊಳಿರುವಂತೊಡಗೂಡು || ೩ ||
ಚೆಲುವಿನ ಲಲನೆಯ ಬಲೆಯಲಿ ಸಿಲುಕದ | ಬಲವಂತರಿಹರೆ ತ್ರೈಜಗದಿ ||
ಖಳನನೊಲಿಸಿ ಕ್ಷಣದಲಿ ವಶಗೊಳಿಸುವೆ | ಕಳುಹೆನ್ನನು ಹರಸುತ್ತ ಮುದದಿ || ೪ ||
|| ಭಾಮಿನಿ ||
ಕಳುಹಿದಂ ಬೆಂಬಲಕೆ ಹರಿಯಪ್ಸರೆಯರನೊಡ |
ಲಲನೆ ವಿಶ್ವಾಚಿಯ ಅಲುಂಬಸಾದ್ಯರ ಸಹಿತ|
ನಲವಿನಿಂ ಒಡಗೊಂಡು ಮೋಹಿನಿ ಹಿಮಾಲಯದ ಬಿಂದು ಸರಸಿಯ ತೀರದಿ |
ಗೆಳತಿಯರ ಸಹಿತಂದು ಚಂಪಕಾವೃಕ್ಷದಡಿ|
ಯಲಿ ಕುಳಿತು ಗಾಯನವ ಪಾಡುತ್ತ ಸಂಭ್ರಮದಿ |
ಖಳನ ಬರವಂ ನಿರೀಕ್ಷಿಸುತಿರ್ದರಿತ್ತ ಭಂಡಾಸುರನು ನಿಜಪುರದಲಿ || ೧ || ೧೨೧
|| ಬೇಹಾಗ್ || ಅಷ್ಟ ||
ತುಹಿನಗಿರಿಯ ಬಳಿ| ವಿಹರಿಸುತಲೆ ನಡೆ | ತಹೆನೆಂದು ಹೊರವಂಟನು ||
ವಿಹಿತದಿ ಸಚಿವರ ಸಹಿತಲೆ ಬಳಿಕ ಉ|ತ್ಸಹದಿ ಭಂಡಾಸುರನು || ೧ ||
ಬಿಂದು ಸರಸಿತೀರ ಕಂದುಬರಲು ಕರ್ಣಾ | ನಂದ ಗಾಯನ ಕೇಳುತ್ತ ||
ಹೊಂದಿ ಭ್ರಮೆಯ ನಡೆತಂದು ಮೋಹಿನಿಯ ಕಂ| ಡೆಂದನು ಮನದಿ ದೈತ್ಯ || ೨ || ೧೨೩
|| ಯಮುನಾ ಕಲ್ಯಾಣಿ || ಅಷ್ಟ ||
ಏನೆಂಬೆನಮಮ ಮಾನಿನಿರನ್ನೆ | ಗೆಣೆ | ಗಾಣೆ ತ್ರಿಜಗಮನ ಮೋಹನ್ನೆ ||
ಏಣಾಂಕ ನಿಭವದನೆಯ ಕಂಡು | ಪಂಚ | ಬಾಣ ಕೊಲ್ಲುವನೆಚ್ಚು ಶರಕೊಂಡು || ೧ ||
ಇವಳಂಗ ಸಂಗದ ಸುಖವನ್ನು | ಅನು | ಭವಿಸದೆ ಬಾಳಿನಾ ಫಲವೇನು ||
ನವಮೋಹನಾಗಿಯ ಬಿಡೆನೆಂದು | ಬಂದು | ಯುವತಿಯೊಳ್ ಬೆಸಗೊಂಡನವನಂದು || ೨ ||
|| ಬೇಹಾಗ್ || ಏಕ ||
ನೀರಜಮುಖಿ ವೈಯಾರದ ಸತಿ ನೀ | ನ್ಯಾರೆನುತಲೆ ಪೇಳೆ |
ವಾರಣಯಾನೆ ಕೃಪಾರಸ ಬೀರಿ ವಿ | ಚಾರವ ತಿಳುಹಿಸು| ಕಾರುಣ್ಯವ ತಳೆ || ಪ ||
ವನಜಾಂಬಕಿ ನಿನ್ನನು ಪಡೆದಿಹ ತವ | ಜನನಿಜನಕರ್ಯಾರು || ಈ ಪರಿ| ಕನಕಾಂಗಿಯೆ ಕಾನನದೊಳಗಿರುವರೆ ||
ನೆನೆದ ಬಯಕೆಯುಸುರು | ಮನವನು | ಕೆಡಿಸಿಹ ಸ್ಮರನೆಸೆಯುತ | ಕಣೆಯನು | ಬಳಲಿಹೆನದರಿಂದಲಿ |
ವನಿತಾಮಣಿ ನೀ ಮನವ ಮಾಡು | ತೆನ್ನನು ಕೂಡುತ ಸುಖವನು ಕರುಣಿಸೆಲೆ || ೧ ||
ಚಂಡಪರಾಕ್ರಮಿ | ಭಂಡಾಸುರ ಬ್ರ| ಹ್ಮಾಂಡಗಳಾಳುವೆನು | ಸುಮನಸ |
ತಂಡ ಬೆದರಿ ಕೈಗೊಂಡು ಸೇವೆಯನು | ದಿಂಡು ಗೆಲುವದಿನ್ನು ||
ಕಂಡರೆ | ನಿನಗೆಣೆಯವನಾ ಮುದ | ಗೊಂಡಿರೆ | ನಡೆತರುತಲೆ ಎನ್ನಯ |
ಖಂಡ ಭಾಗ್ಯಗಳನುಂಡು ನಿತ್ಯ ಸುಖ | ಗೊಂಡು ಬಾಳುವುದೆಲೆ ಪುಂಡರೀಕಾಂಬಕಿ || ೨ || ೧೨೭
|| ಕಾಪಿ || ಏಕ ||
ಕೇಳುದೈತ್ಯ ತಿಲಕ | ಹೇರಸಿಕ | ಕೇಳು ದೈತ್ಯತಿಲಕ ||
ಕೇಳುದೈತ್ಯ ನಾ ಪೇಳುವ ನುಡಿಯನು | ಆಲಸ್ಯಗೊಳದೆ ಲೀಲೆಯೊಳೆಲ್ಲವ || ಪ ||
ಪೆತ್ತವರನ್ನರಿಯೆ | ಸುಜನರು |
ಎತ್ತಿಮುದದಿ ಪೊರೆಯೆ ಮೋಹಿನೆನುತ್ತಲೆನ್ನ ಕರೆಯೆ | ಪ್ರಾಯ ಸ| ಮರ್ಥೆಯಾಗಿ ಮೆರೆಯೆ | ನಾನೆರೇ ಚಿತ್ತಜ ಶರಹತಿವೆತ್ತು ಬಳಲಿ ಅರ|
ಸುತ್ತಲಿ ವಿಟರನು ಇತ್ತಲು ಬಂದಿಹ || ೧ ||
ನಿನ್ನ ಕೀರ್ತಿಗಳನು | ಲಾಲಿಸು | ತಿನ್ನೈತಂದಿಹೆನು | ವರಿಸುವ | ನಿರ್ಣಯದಲಿ ನಾನು ತವಮನ | ದನ್ನೆಯಾಗಲಿಹೆನು |
ಅರೆಚಣ | ಎನ್ನಗಲದೆ ಸುಖವನ್ನೀವೆನೆನುತ | ನಿರ್ಣಯ ಭಾಷೆಯನಿತ್ತರೆ ದಿಟ || ೨ ||
|| ಸಾಂಗತ್ಯ || ರೂಪಕ ||
ಚಂಚಲಾಕ್ಷಿಯೆ ಕೇಳು | ವಂಚನೆ ಮಾತಲ್ಲ | ಪಂಚಬಾಣನ ಕೇಳಿಯೊಳಗೆ ||
ಮಿಂಚು ಬಳ್ಳಿಯ ಅರಸಂಚೆ ಗಮನೆನಾ ನಿ | ರ್ವಂಚನೆಯಲಿ ಮುದಗೊಳಿಪೆ || ೧ ||
ಕ್ಷಣಕಾಲ ಅಗಲದೆಂ | ದೆನುತ ನಂಬಿಸುತ ಮೋ | ಹಿನಿಯೊಡಗೂಡು ತೈ ತಂದಾ ||
ದನುಜೇಶ ಸಚಿವರಾ | ಕ್ಷಣ ವಿಶ್ವಾಚಿಯ ಮುಖ್ಯ | ರನು ಕೂಡಿದರು ಮುದದಿಂದ ||2||
ಹಗಲಿರುಳೆನ್ನದೆ | ಮೃಗನಯನೆಯರ ಬ | ಲೆಗೆ ಸಿಕ್ಕಿರಮಿಸಿದರವರು ||
ಬಗೆಯದೆ ನಿತ್ಯಾಹ್ನಿ|ಕಗಳನು ತ್ಯಜಿಸಿ ಸುಖಿಗಳಾದೆವೆಂದು ಹಿಗ್ಗಿದರು || 3 || ೧೩೧
|| ಕಲ್ಯಾಣಿ || ತ್ರಿವುಡೆ ||
ಸುರಪ ಮುಖ್ಯಾಮರರು ಭಂಡಾ | ಸುರನ ಹಿಂಸೆಯ ತಾಳಲಾರದೆ |
ಮರುಗಿ ಗಿರಿಕಾನನಗಳಲಿ ಸಂ | ಚರಿಸುತಿರಲು || ೧ ||
ಕಾಣುತೊಂದಿನ ಗೀಷ್ಪತಿಯ ಗೀ | ರ್ವಾಣಪತಿ ಮರುಗುತ್ತ ವಂದಿಸಿ |
ಆನಲಾರದ ಕಷ್ಟವಿದಕೇನು ಯತ್ನ||೨||
ತೋರಿಪಥವನು ರಕ್ಷಿಸೆಂದು ಬ | ಲಾರಿ ಮರುಗುತ ನುಡಿಯಲೊಡಲು |
ಕ್ಕೇರಿ ಕರುಣದಿ ನುಡಿದಧೀಷಣ ಧೈರ್ಯಗಳನು ||೩||೧೩೪
|| ಬಿಲಹರಿ || ಅಷ್ಟ ||
ಮರುಗದಿರೈ ಸುರಪಾಲ | ಬಂತು | ದುರುಳ ದೈತ್ಯರಿಗೆಲ್ಲ ಸಾಯುವ ಕಾಲ ||
ಅರುವತ್ತು ಸಾವಿರ ವರುಷ | ಪುರ | ಹರನೊಲಿದಿತ್ತಿರೆ ತೀರಿತಾಯುಷ್ಯ ||೧||
ಹರಿ ಕಳುಹಿದ ಮೋಹಿನಿಯೊಳು | ಮೈಯ | ಮರೆತು ಭೋಗಿಪನು ದುಷ್ಟನು ಹಗಲಿರುಳು ||
ನಿರತ ನಿತ್ಯಾಹ್ನಿಕ ಮರೆತು | ದಾನ | ವರ ವಿನಾಶಕೆ ಬುದ್ಧಿ ವಿಪರೀತವಾಯ್ತು ||೨||೧೩೬
||ಭಾಮಿನಿ||
ಕುಂಭಿನಿಯೊಳ್ಯಾರಿಲ್ಲ ಶ್ರೀತ್ರಿಪು |
ರಾಂಬಿಕೆಯ ಹೊರತವನ ವಧಿಸಲು |
ತ್ರ್ಯಂಬಕನ ವರಬಲದಿ ನಾವದರಿಂದ ಶೀಘ್ರದಲಿ ||
ಬೆಂಬಿಡದೆ ಬಲುಭಕ್ತಿಯಲಿ ಮರೆ
ಗೊಂಬ ಜನನಿಯನೆನಲು ತ್ರಿದಶಕ |
ದಂಬ ಸಹಿತಲೆ ತೆರಳಿ ತುಹಿನಾಚಲಕೆ ಭರದಿಂದ ||೧|| ೧೩೭
|| ತೋಡಿ || ರೂಪಕ ||
ಧೀಷಣನೊಡಗೊಂಡು ವಾಸವಾದಿಗಳು ಸ | ರ್ವೇಶ್ವರಿ ತ್ರಿಪುರಾಂಬಿಕೆಯನು ||
ತೋಷದಿ ಭಜಿಸಲು | ಶ್ವಾಸಧಾರಣೆಯೊ | ಳೇಕಾಸನದಲಿ ಕುಳಿತುದನು ||೧||
ಅರಿತು ಶುಕ್ರಾಚಾರ್ಯ ನೆರೆ ಜ್ಞಾನದೃಷ್ಟಿಯೊ | ಳಿರದೆಲ್ಲ ಸುರರ ಸಾಹಸವ ||
ಭರದಿ ದಾನವರನೆಚ್ಚರಿಸಲು ಶೂನ್ಯಕ | ಪುರಕೈದಿ ತಳೆದ ಚೋದಿಗವ ||೨||
ವೇದಾಧ್ಯಯನ ಮೊದಲಾದ ಸಧರ್ಮದ | ಹಾದಿಯ ಬಿಟ್ಟೆಲ್ಲ ಸ್ಮರನ |
ಬಾಧೆಗೆ ಸಿಲುಕಿ ವಿ | ನೋದದೊಳಿರುತಿರೆ | ಕ್ರೋಧದಿ ಕರೆದು ದಾನವನ ||೩||
ಮಂದಮತಿಯೆ ನಿನ್ನ ಭಾಗ್ಯಕಿಂದವಸಾನ | ಬಂದುದ ಪೇಳುವದೇನು ||
ಇಂದಿರಾಧವ ನಿಮ್ಮ ಕೆಡಿಸಲು ಕಳುಹಿದ | ನೆಂದರಿಯದೆ ಮೋಹಿನಿಯನು ||೪||
ಹಗಲಿರುಳೆನ್ನದೆ | ಭೋಗಿಸೆ ನಿತ್ಯಾಹ್ನಿ | ಕಗಳನ್ನು ತೊರೆದು ಪುಣ್ಯವನು ||
ಮಿಗೆ ಕಳಕೊಂಡೆ ದೈತ್ಯಾನ್ವಯಕಿಂತು ಕೇ | ಡಿಗನಾದೆ ಭಂಡನು ನೀನು ||೫||
ಅಳಿದುದು ನಿಮ್ಮಯ ಪುಣ್ಯದ ಫಲವೆಂದು | ತಿಳಿದು ಧೀಷಣ ಮತದಲಿ ||
ಬಲವೈರಿ ಶ್ರೀ ತ್ರಿಪುರಾಂಬಿಕೆಯ | ನೊಲಿಸಲು ತಪಗೈವ ಭಕ್ತಿಯಲಿ ||೬||
ಆ ಮಹಾದೇವಿ ತ್ರಿದಶರಿಗೊಲಿದರೆ ನಿ | ರ್ನಾಮವಪ್ಪುದು ದೈತ್ಯಸ್ತೋಮ ||
ಕಾಮಿನಿಯರ ಮೋಹ ತೊರೆದೇಳುಕೆಡಿಸು | ಸುತ್ರಾಮಾದಿಗಳ ತಪವ ||೭||೧೪೪
||ಭೈರವಿ || ಅಷ್ಟ ||
ಅರರೆ ತಪ್ಪಾದುದೆಂದು | ಭಂಡಾಸುರ | ಗುರುಚರಣಕೆ ಮಣಿದು ||
ತರುಣಿಯರನು ಧಿ | ಕ್ಕರಿಸಿ ಪೊರಟ ತ್ರಿದ | ಶರ ತಪ ಕೆಡಿಸಲೆಂದು ||೧||೧೪೫
|| ವಾರ್ಧಿಕ ||
ಆದಿತೇಯರನು ಸಲಹುವನೆಂದು ಬಗೆದಾ ಮ |
ಹಾ ದೇವಿ ತನ್ನಾಜ್ಞೆಯಿಂದನಿರ್ಮಿಸಲು ಘನ |
ವಾದ ಪ್ರಾಕಾರಮಂ ಕಂಡು ದಾನವನದಂ ಮನದಿ ಕೌತುಕ ತಾಳುತ ||
ಕ್ರೋಧದಿಂದೆಚ್ಚು ಭರದಲಿ ದಿವ್ಯಶರಗಳನು |
ಭೇದಿಸಲು ಬಳಿಕೊಂದು ಮಗುಳೊಂದು ನಿರ್ಮಾಣ |
ವಾದಂತೆ ಕೆಡಹುತೀರ್ದನು ಖಳನು ಕಂಡಾಗ ಶ್ರೀದೇವಿ ಖಾತಿಯಿಂದ ||೧||
ಕರೆದು ಜ್ವಾಲಾಮಲಿನಿದೇವಿಯನ್ನು ನೀ |
ಉರಿದು ಸುತ್ತಲು ಕೋಟೆಯಂತೆ ರಕ್ಷಿಸು ಸುರರ |
ಕರುಣದಿಂದಲೆನಲು ಮೂವತ್ತು ಯೋಜನದಿ ದಳ್ಳುರಿಯತೆ ಪ್ರಜ್ವಲಿಸಲು ||
ಪರಿಪರಿಯ ಮಂತ್ರಾಸ್ತ್ರಗಳನೆಚ್ಚು ಭಂಡನದ |
ತರಿಯಲಸದಳನಾಗಿ ನಾಚುತ್ತ ಬಳಿಕ ದೈ |
ತ್ಯರ ಕೂಡಿಕೊಂಡು ಶೂನ್ಯಕಪುರವ ಪೊಕ್ಕನೇನೆಂಬೆ ದೇವಿಯ ಮಹಿಮೆಯ ||೨||೧೪೭
|| ಅರಭಿ || ತ್ರಿಪುಟ ||
ತರಹರಿಸೆ ದಳ್ಳುರಿಯನೀಕ್ಷಿಸೆ | ಸುರರು ಧೀಷಣ ನುಡಿದನಂಬಾ |
ಧ್ವರದಿ ದೇವಿಯನೊಲಿಸಿಕೊಂಬುದು | ತ್ವರಿತದಿಂದ ||೧||
ಕತ್ತರಿಸಿ ತನುವಿಂದ ಮಾಂಸವ | ನಿತ್ತು ಪೂರ್ಣಾಹುತಿಯ ಮಾಳ್ಪುದೆ |
ನುತ್ತ ಯಾಗವ ನಡೆಸುತಿರ್ದರು | ಭಕ್ತಿಯಿಂದ ||೨||
ಆ ಸಮಯ ದಿವ್ಯತೇಜೋರಾಶಿ ಕಾ | ಣಿಸೆ ಯಜ್ಞಕುಂಡದಿ |
ಭಾಸುರದ ಶ್ರೀಚಕ್ರ ಮಧ್ಯದಿ ತೋಷದಿಂದ ||೩||೧೫೦
ವ್ಯಕ್ತವಲ್ಲದ ಆದಿಶಕ್ತಿಯು | ಭಕ್ತರನು ಸಲಹುವೆನೆನ್ನುತ |
ಪ್ರತ್ಯಕ್ಷ ಸ್ತ್ರೀರೂಪದಲಿ ಜಗತ್ತಿಗೆ ವ್ಯಕ್ತವಾಗಿ ||೪||
ನಿಂದಳು ಮಹಾದೇವಿಯೊಲಿದಾ | ನಂದರಸದ ಮಹಾಬ್ಧಿಯಂದದಿ |
ಹೊಂದಿ ದಿನಕರ ಕೋಟಿ ತೇಜವ | ಸುಂದರಾಗಿ || 5||
ಕಡಿದ ಮಾಂಸವು ತುಂಬಿತಾಗಲೆ| ಒಡಲಿನೊಳು ತ್ರಿದಶರಿಗೆ ತ್ರೈಜಗ|
ದೊಡತಿ ಕರುಣೆಯ ಮಹಿಮೆಗಳನಾ| ನುಡಿಯಲೇನು||೬|| ೧೫೨
|| ಹಂಸಧ್ವನಿ||ಅಷ್ಟ||
ದೇವಿದರ್ಶನಕೆ ಮ| ಹಾವಿಷ್ಣು ಕಮಲಜ| ಭಾವಜಾಂತಕ ಮುಖ್ಯರು|
ಧಾವಿಸಿ ನಡೆತಂದರಾವೇಳ್ಯ ಸನಕಾದಿ| ದೇವಮುನಿಗಳೆಲ್ಲರು||೧||
ಜಯಜಯ ಜಗದಂಬಾ| ಜಯಜಯ ತ್ರಿಪುರಾಂಬಾ|
ಜಯಜಯ ಲೋಕನಾಯಕಿಯೇ| ಜಯಜಯ ಕಾಮಾಕ್ಷಿ|
ಜಯತು ಪರಾತ್ಪರೆ| ದಯದಿಂದ ಸಲಹೆಮ್ಮ ತಾಯೆ||೨||
||ಅರಭಿ||ತ್ರಿಪುಟ||
ಹರಿಹರ ಬ್ರಹ್ಮಾದ್ಯರೇಳಿರಿ| ಸುರಪಮುಖ್ಯರು ಧೈರ್ಯ ತಾಳಿರಿ|
ಚರಣದರ್ಶನವಿತ್ತು ನಿಮ್ಮನು| ಪೊರೆಯಲೆಂದು||೧||
ಅರ್ತಿಯಲಿ ಮಣಿದ್ವೀಪದಲಿ ನೆಲ| ಸುತ್ತಿರುವ ತ್ರಿಪುರಾಂಬಿಕೆಯೊಲಿದು|
ಭಕ್ತಿಗೀ ಲಲಿತಾ ಸ್ವರೂಪವ| ನೆತ್ತು ಬಂದೆ||೨||
ಇನ್ನು ಭಯವೇತಕ್ಕೆ| ಕಾರಣವನ್ನು ಪೇಳಿರಿ|
ಮಾನಸರಿದಕೆ ಖಿನ್ನರಾಗುವದೇಕೆ ತಿಳಿದಪೆ| ನಿರ್ಣಯವನು||೩||
ಖೂಳಭಂಡಾಸುರನುಪಟಳವ| ಪೇಳಲೇನೆಲೆ ತಾಯೆ ನಮ್ಮನು|
ಗೋಳುಗುಡಿಸಿಹಸತ್ಯಧರ್ಮವ| ಬಾಳಗೆಡಹಿ||೪||
ಬಿಡಿರಿ ಭೀತಿಯ ದುರುಳ ಭಂಡನ| ಕೆಡಿಸಿ ಧರ್ಮವ ಮದದಿ ಮೆರೆವನ|
ಮಡುಹಿ ನಿಮ್ಮನು ಪೊರೆಯುವೆನೆನುತ| ಕೊಡಲಭಯವಾ||೫||
|| ಹಂಸಧ್ವನಿ||ರೂಪಕ||
ಶ್ರೀ ಮಹಾದೇವಿಯ ವಾಸಕ್ಕೆನುತಲೆ| ತಾಮರಸಾಸನನಂದು |
ನೇಮವನೀಯಲು ವಿಶ್ವಕರ್ಮನು ದಿವ್ಯ| ಸೀಮೆಯನೊಂದ ನಿರ್ಮಿಸಿದ||೧||
ಶ್ಯಾಮಲಾ ದೇವಿ ಬ್ರಾಹ್ಮಿ ಮಹೇಶ್ವರಿ ಮುಖ್ಯ| ರಾ ಮುಹೂರ್ತದಿ ಯೋಗಿನಿಯರು||
ಆಮಂತ್ರಾಧೀನೆ ದುರ್ಗೆಯು ಸಹ ಬಂದರು| ಶ್ರೀಮಹಾದೇವಿಯ ನುತಿಸಿ||೨||
||ಸಾವೇರಿ||ಝಂಪೆ||
ಚಿಂತಿಸಿದ ಕಮಲಭವ| ನಂತರಂಗದಿ ಸೂರ್ಯ| ನೆಂತೆಸೆವ ರಾಜ್ಯವಿದರ|
ಯಂತೋರ್ವಳೇ ದೇವಿ| ಕಾಂತೆ ಲಲಿತೆಯಿರುವಳು| ಕಾಂತನಿವಳಿಂಗಾರು ತಿಳಿಯೆ||೧||
ಎಂದು ಯೋಚಿಸುತಿರೆ |ಬಂದನೊಡನಾದಿ ಶಿವ| ಕಂದರ್ಪಕೋಟಿ ರೂಪದಲಿ||
ಹೊಂದಿ ಕಾಮೇಶ್ವರನೆಂ| ದೆಂಬ ಪೆಸರನು ಆ| ನಂದದಲಿ ಕಂಡು ಕಮಲಜನು||೨||
ಮಾದೇವನೀತನಲಿ ಸ| ಹದೇವಿಗೆಣೆಯ ಲೇ| ಸಾದುದೆಂದೆನುತ ನಮ್ಮಮ್ಮ||
ಮೋದದಿಂ ವರಿಸೆ ನೀ| ನಾದಿ ಮೂರುತಿ ಶಿವನ| ಸಾದರದಿ ಮುದಗೊಳಿಸು ನಮ್ಮ||೩||
ದೇವಿ ಕಾಮೆಶ್ವರರ ವೈ| ವಾಹ ಸಂಭ್ರಮವ| ನಾವು ಕಣ್ಣಾರೆ ಕಂಡದನು||
ಪಾವನರು ಎನೆಲಲಿತೆ| ಕಾಮೇಶ್ವರರು| ತಾವೊಲಿದು ಕೊರಳ ಹಾರವನು||೪||
ತೊಡಿಸಿದರು ಕಂಠಕ್ಕೆ| ಒಡನಾವಧೂವರರ| ಅಡರಿಸಲು ಮೆರೆವ ಮಂಟಪವ||
ಜಡಜನಾಭನು ಧಾರೆ| ಯೆರೆಯೆ ಕಮಲಜನಿತ್ತ| ಉಡುಗೊರೆಯ ಮೆರೆವ ಪುಷ್ಪಕವ||೫||
||ಹಂಸಧ್ವನಿ||ರೂಪಕ||
ಬಲವೈರಿ ಮುಖ್ಯರು| ಬಲು ಭಕ್ತಿಯಲಿ ದೇವಿ| ಲಲಿತಾಂಬ ಕಾಮೇಶ್ವರರಿಗೆ||
ತಿಳುವದಿತ್ತುಡುಗೊರೆಗಳ| ಮಣಿಯುತ ನುತಿ| ಸಲು ಧನ್ಯರಾದೆವೆಂದು ಮಿಗೆ||೧||
ಶ್ರೀದೇವಿ ಲಲಿತಾಂಬೆ| ಆದಿತೇಯರನು ಕೃ| ಪಾ ದೃಷ್ಟಿಯಿಂದೀಕ್ಷಿದಳು||
ಸಾಧಿಸೆ ಸಕಲರಿಷ್ಟಾರ್ಥವ ಕಾ| ಮಾಕ್ಷಿ ಎಂ| ದಾದುದಾ ದೇವಿಗೆ ಪೆಸರು||೨||
ಮೆರೆಯೆ ಸಂಪದವೆಲ್ಲ| ಭರಿತವಾಗಿಯೆ ತ್ರಿದ| ಶರು ಕಷ್ಟಗಳನ್ನೆಲ್ಲ ಮರೆತು||
ಹರುಷದೊಳಿರೆ ದೇವಿರಾಜ್ಯದಿ ನಡೆತಂದ| ಸುರಮುನಿ ನಾರದನಂದು||೩||
ಮಣಿದೆಂದನೆಲೆ ಜಗಜ್ಜ| ನನಿ ನಿನ್ನಯ ಲೀಲೆ| ಅನುಪಮವೈಸೆಲೆ ತಾಯೆ||
ಅನಿಮಿಷರಾನಂದ| ವನಧಿಯೊಳ್ ಮುಳುಗಿಸೆ| ಘನಕಾರ್ಯಗಳ ಮರೆತಿರುವೆ||೪||
ವಧಿಸದೆ ಭಂಡನ |ಮುದದೊಳಿರುವರೆ ಲೋ| ಕದ ವರ್ಣಾಶ್ರಮಧರ್ಮವಳಿದು||
ಎದೆಗುಂದಿರುವರಾ| ಶ್ರಮದ ಋಷಿಗಳು ಹಿಂಸೆ| ಅಧಿಕವಾಗಿದೆ ದುಷ್ಟನಿಂದು||೫||
ಸನ್ನಾಹದಿಂದಿ| ರ್ಪ ನಿನ್ನಗ್ನಿ ಪ್ರಾಕಾರ| ವನ್ನು ಮುರಿಯದೀರ್ದ ದೈತ್ಯ||
ತನ್ನ ನಿಖಿಳ ಬಲ| ವನ್ನು ಕೂಡುತ ಧಾಳಿ| ಯನ್ನಿಡೆ ಯೋಚಿಪನಾತ ||೬||
ಅರಿಕೆ ಗೈದಿಹೆನಮ್ಮ| ರಣ ಚಿತ್ತಕೆ ಮುಂದೆ | ಸರಿದೋರಿದಂತೆ ಕಾರ್ಯವನು||
ವಿರಚಿಸೆಂಬೆನುತಲೆ ಚರಣಕ್ಕೆ ನಮಿಸುತ್ತ| ಸುರಮುನಿನಾಥನೈದಿದನು||೭||
||ಸೌರಾಷ್ಟ್ರ||ತ್ರಿವುಡೆ||
ಸುರಮುನಿಯ ನುಡಿಕೇಳಿ ಭಂಡಾ| ಸುರನ ವಧಿಸಲುಮನದೊಳಾ ನಿ|
ರ್ಧರಿಸುತಲೆ ಘನಶಕ್ತಿಸೇನೆಯ| ಬರಿಸಲಂದು||೧||
ಏರಿ ರಣಕೋಲಾಹಲವೆನುವ| ವಾರಣವ ಸಂಪತ್ಕರಿಯು ರಣ|
ಭೇರಿ ಮೊಳಗಲು ಬಂದಳಾ ರಣಧೀರೆಮಣಿಯು||೨||
ಧರಿಸಿ ಪಾಶಾಂಕುಶಗಳನು ಬಲು| ಭರದೊಳಶ್ವಾರೂಢೆಯಡರುತ|
ಮೆರೆವ ಅಪರಾಜಿತಹಯವ ಬಂದೆರಗಿ ನಿಲಲು||೩||
ಶಕ್ತಿನಾಯಕಿಯರು ಮೆರೆಯೆ ಕಿರಿ| ಚಕ್ರದಲಿ ದಂಡನಾಥೆಯು|
ಆಕ್ಷಣದಿ ನಡೆತರಲು ಸೇನಾ| ಧ್ಯಕ್ಷೆಯಾಗಿ||೪||
ಆ ಮಹಾರಥಗೇಯ ಚಕ್ರದಿ| ಶ್ಯಾಮಲಾಂಬೆಯು ಕುಳಿತು ಶಕ್ತಿ|
ಸ್ತೋಮ ಸಹಿತಾಮಂತ್ರಿಣಿಯು ಬರೆ| ತಾಮುದದಲಿ||೫||
ಪರಿಕಿಸುತಸರ್ವರನು ತಾ ಘನ| ಹರುಷದಿಂದಲೆ ರಾಜರಾಜೇ|
ಶ್ವರಿಯು ಶ್ರೀಚಕ್ರವೆನುವ ರಥದಿ| ಮೆರೆದಳಾಗ||೬||
||ವಾರ್ಧಿಕ||
ವಿಸ್ತರಿಸಲೆಂತು ಶ್ರೀಚಕ್ರಮಂ ಮೆರೆವವಂ| ತಸ್ತುಗಳು ಅದರೊಳಗೊಂಭತ್ತು| ಶ್ರೀಲಲಿತಾಂಬೆ|
ಶಕ್ತಿದೇವಿಯರ ಪರಿವಾರ ಮೆರೆಯಲ್ಕೆ ನೂರಿಪ್ಪತ್ತು ಮಂದಿ ರಥದಿಂ||
ಛತ್ರಚಾಮರಗಳು ವಿರಾಜಿಸುತ್ತಿರಲ್ ತ್ರೈ| ಮೂರ್ತಿಗಳು ಸುರರು ಜಯಜಯವೆಂದು ಪಾಡುತಿರೆ|
ಹಸ್ತಗಳ್ ನಾಲ್ಕರಲಿ ಪಾಶಾಂಕುಶಾದಿಗಳವೆತ್ತು ರಥವನ್ನೇರಲು||೧||
||ಸಾಂಗತ್ಯ||ರೂಪಕ||
ಈರೀತಿಯಲಿ ಪರಿ| ವಾರಸಹಿತ ಲಲಿತಾ ರಾಜ್ಯದಿಂ ಪೊರವಂಟು||
ವಾರಿಧಿ ಘೋಷದಿ| ಸಾರಿ ಶೂನ್ಯಕಪುರ| ಸೇರಿ ಮುತ್ತಲು ದೇವಿಯರು||೧||
ಕಂಡನುತ್ಪಾತವ| ಭಂಡಾಸುರನು ಭ್ರಮೆ| ಗೊಂಡೇನಿದೇನಿದು ಸುರಿವ||
ಕೆಂಡದಮಳೆ ದೈತ್ಯ| ತಂಡ ಬೆದರಲು ಭೂ| ಮಂಡಲ ಕಂಪಿಸುತಿರುವ||೨||
ಪರಿಯು ಚೋದಿಗ ಮಂ| ದಿರಗಳೊಳಗೆ ನಾರಿ| ಯರ ಸುಮಂಗಲ ಸೂತ್ರಾದಿಗಳು||
ಧರೆಗೆ ಕಳಚಿಬೀಳುತ್ತಿರುವ ಬಗೆಯಿದು ದೈ| ತ್ಯರವಿನಾಶಕೆ ಮುನ್ಸೂಚನೆಯು||೩||
ಯತ್ನವೇನಿದಕೆಂದು | ಚಿತ್ತದೊಳಗೆ ಯೋಚಿ| ಸುತ್ತಿರಲಾಗ ವಿಶುಕ್ರ||
ದೈತ್ಯನಣ್ಣಗೆ ಮಣಿಯುತ್ತಲೆ ನುಡಿದನು| ವ್ಯರ್ಥ ಚಿಂತಿಪುದೇತಕೆನುತ||೪||
||ಕೇದಾರ||ಅಷ್ಟ||
ಅಣ್ಣ ಲಾಲಿಸು ಬಿಡು| ಗಣ್ಣರು ನಾವಿತ್ತ| ಬನ್ನದಿ ಮನದಿ ನೊಂದು||
ಅನ್ಯರ ಸಲಹುವರ| ನ್ಯಾರ ಕಾಣದೆ| ವಹ್ನಿಯೊಳ್ ಬೀಳ್ವೆವೆಂದು||೧||
ಸಿದ್ಧರಾಗಿರೆ ವಹ್ನಿ| ಮಧ್ಯದಿ ನಾರಿ ತಾ| ನೆದ್ದು ಬಂದೀರ್ಪಳಂತೆ||
ಯುದ್ಧದಿ ದೈತ್ಯರ| ಮರ್ದಿಪೆನೆನುತಲೆ| ಸದ್ಧೈರ್ಯ ನುಡಿದು ಕಾಂತೆ||೨||
ತನ್ನಂತಿರುವ ಸ್ತ್ರೀಯ| ರನ್ನು ಹುಟ್ಟಿಸಿ ಶೌರ್ಯ| ತೊರುವೆನೆನ್ನುತ||
ಉನ್ಮತ್ತಳಾಗಿ ಬಂದಿಹಳಂತೆ ಬರಿದೆ| ನಮ್ಮನ್ನು ಕೆಣಕುವಡಿತ್ತ||೩||
ಹರಿಹರ ಬ್ರಹ್ಮರು| ತರಹರಗೊಂಡಿರೆ| ತರುಣಿಯ ಭಯವು ವ್ಯರ್ಥ||
ಭರದಿ ಕಳುಹಲು ದೂ| ತರನಿಟ್ಟು ಪಿಡಿದೆಳೆ| ತರುವರಾಸತಿಯನಿತ್ತ||೪||
||ಕಂದ||
ಎಂದು ವಿಶುಕ್ರಂ ವಿಕ್ರಮ| ದಿಂದಾಡಿದ ಮತನಾಲಿಸುತ ವಿಷಂಗ|
ವಂದಿಸಿ ಪೇಳಿದ ಯೋಚಿಸಿ| ಮುಂದಣ ಕಾರ್ಯವ ಮಾಳ್ಪುದೆನುತಾ ಖಳಗಂ||೧||
||ಬಿಲಹರಿ|| ಅಷ್ಟ||
ಲಾಲಿಸಿ ಕೇಳೆನ್ನ ನುಡಿಯ| ಕಷ್ಟ| ಕಾಲ ಸಂಭವಿಸಿದಂತಿದೆ ದೈತ್ಯರೊಡೆಯ||
ಧಾಳಿಮಾಡಿರುವಂತ ಸತಿಯ| ನೀನು| ಕೀಳೆಂದೆಣಿಸದೆ ಯೋಚಿಸಿ ಮಾಡುಕಾರ್ಯ||೧||
ದಕ್ಷರು ಶತ್ರುಪಕ್ಷದವರು| ನೆರೆ| ಲೆಕ್ಕಿಸದಿರರು| ಪೂರ್ವದಿ ಹಿರಣ್ಯಕನು||
ಸೊಕ್ಕಿದ ಮೃಗವೆಂದು ಬಗೆದು| ಮರ| ಣಕ್ಕೊಳಗಾದ ನರಹರಿಯೊಳಂದು||೨||
ಚಂಡಿಕೆಯೆಂದೆಂಬ ನಾರಿ| ವರ| ಗಂಡುಗಲಿಮಹಿಷಗಾದಳು ಮಾರಿ||
ಕೊಂದು ಶಕ್ತಿಯನ್ನ್ಯಾವ ವಸ್ತು| ತಾನ| ಖಂಡಿತವಾಗಿರ್ಪುದೋ ಯಾರಿಗೆ ಗೊತ್ತು||೩||
ಕಳುಹಿಸಿ ಗೂಢಚಾರರನು| ಬಲಾ| ಬಲಗಳ ತಿಳಿದು ವಿಕ್ರಮಳಾದಡಿನ್ನು||
ಲಲನೆಯಕೂಡೆ ಸಂಧಿಯನು| ಮಾಳ್ಪು| ದೊಳಿತೆಂದು ತೋರ್ಪುದು| ತವಚಿತ್ತವಿನ್ನು||೪||
||ಮಾರವಿ||ಏಕ||
ಕೇಳಿ ವಿಷಂಗನ ವಚನವ ಭಂಡನು| ಪೇಳಿದನೆಲೆ ಮರುಳೆ||
ಬಾಲೆಗೆ ಬೆದರುವ ಭಟನೆ ಮನದಿ ನೀ| ನಾಲೋಚಿಸದೊರೆವೆ||೧||
ದೈತ್ಯಬಲವಿದು ಸಹಸ್ರಕ್ಷೋಹಿಣಿ| ಸಪ್ತಸಾಗರಗಳ||
ಬತ್ತಿಸಬಲ್ಲುದು| ಗುಟ್ಟನರಿಯೆ| ಖತಿವೆತ್ತರೆ ಜಗವೆಲ್ಲ||೨||
ಹರಿಹರ ಕಮಲಜ ಸುರರೆಲ್ಲರು ತರಹರಗೊಂಡಿರುತಿರಲು||
ಲಲಿತೆಯೆಂದರೆ ಕೋಮಲೆ ತಾ ಸರಿಯೆನಗೆಂತಹಳು||೩||
ಕರೆದಾಕ್ಷಣ ದುರ್ಮದನೊಡನೊರೆದನು| ತೆರಳಿ ಸೇನೆಸಹಿತ|
ಭರದೊಳೆಳೆದು ತಾ ತರುಣಿಯ ನೀನೆಂದಿರದಾಜ್ಞೆಯನಿತ್ತ||೪||
||ಭೈರವಿ||ಅಷ್ಟ||
ದೈತ್ಯನೀಯಲು ನೇಮವ| ನೆರಹಿಕೊಂಡು| ಹತ್ತಕ್ಷೋಹಿಣಿ ಬಲವ||
ಧೂರ್ತರ ಕಾಲ ಜಂಘಾದ್ಯರ ನೆರೆ ನಿಲಿ| ಸುತ್ತ ರಕ್ಷಿಸೆ ಪುರವ||೧||
ಲಲಿತಾದೇವಿಯ ಸೈನ್ಯವ| ಮುತ್ತಲು ಬಲಸಹಿತಲೆ ದಾನವ||
ತಿಳಿದು ಸಂಪತ್ಕರಿದೇವಿಯು ಕರೆದಳು| ತಳೆದು ಚಿತ್ತದಿ ರೋಷವ||೨|
|
ಫಡ ದನುಜಾಧಮನೆ|| ಕೊಡು ಬೇಗ ಎನ್ನೊಡನೆ||
ಕಡುಗಲಿಯಾದರೆ| ಬಡಿದು ಬಲವ ದೆಸೆ| ಗೆಡಿಸಲೇತಕೆ ಸುಮ್ಮನೆ||೩||
ನರಿಯೊಡನೆ ರಣವು| ಘನವೆ ತ್ರಿ| ಪುರಾರಿಗೆ ನಾವಂಜೆವು||
ಸಾರಿ ಶೂನ್ಯಕಪುರವನು ಮುತ್ತಿ ಕೆಟ್ಟೆ ನೀ| ಏರಿ ಶರಕೆ ಗರ್ವವು||೪||
ಗರ್ವವೇರಿದು ನಿಮಗ್| ರಣದಲಿ ಸು| ಪರ್ವರ ಗೆಲಿದ ಮ್ಯಾಗೆ|
ಊರ್ವಿಯೊಳೆಣೆಯಿಲ್ಲವೆಂದು ತೋರಿಸು ನಿನ್ನ| ಸರ್ವಶಕ್ತಿಯನು ಮಿಗೆ||೫||
ಎನಲೊಂದು ಬಾಣದಿಂದ| ಕಿರೀಟದ ಮಣಿಯೊಂದನು ಕೆಡಹಿದ|
ದನುಜನು ಶೌರ್ಯದಿ ಸಂಪತ್ಕರಿ ದೇವಿಯನು ಕಂಡು| ಘರ್ಜಿಸಿದ||೬||
ಒಡನತಿ ಖಾತಿಯೊಳು| ಎದೆಗೆ ಗುರಿಪಿಡಿದು ಬಾಣವ ಬಿಡಲು|
ಮಡಿದ ದುರ್ಮದ ದೈತ್ಯ| ಪಡೆಯ ಶಕ್ತಿಸೇನೆ| ಕಡಿದು ಚೂರ್ಣವ ಮಾಡಲು||೭||
ಅಳಿದ ಮುರ್ಮದನೆಂಬುದ ಲಾಲಿಸಿ ಭಂಡ| ಬಲು ಖತಿಯನು ತಳೆದು||
ಲಲನೆಯಬಿಡೆನೆಂದು| ಬಲು ಮಾಯಾವಿ ಕುರಂಡ| ಖಳನನಾಕ್ಷಣ ಕರೆದ||೮||
||ಕಾಂಬೋಧಿ||ಝಂಪೆ||
ಮಂಡೆಯನು ಮಣಿದಾ| ಕುರಂಡಾಸುರನು ನುಡಿದ| ಗಂಡುಗಲಿ ದೈತ್ಯಕುಲದೊಡೆಯ||
ಭಂಡಾಸುರನೆ ಖಾತಿ| ಗೊಂಡಂತಿರುವೆ ನೀನು| ಕಂಡರೇನಿದೆ ಪೇಳು ಕಾರ್ಯ||೧||
ಏನೊರೆವೆ ಕುರಂಡ| ಮಾನಿನಿಯು ಮದದಿಂದ| ಶೂನ್ಯಕಾಪುರ ಮುತ್ತಿದವಳ||
ಚೂಣಿಯಲಿ ಕಟ್ಟಿತರೆ| ಸೇನೆಸಹ ದುರ್ಮದನ| ತಾನಟ್ಟಿದರೆ ತರಿದಳವನ||೨||
ಮಡಿದನೇ ದುರ್ಮದನು| ಬಿಡು ಯೋಚನೆಯನು ನೀ| ಕೊಡು ನೇಮವವನು ಭರದೊಳೆನಗೆ||
ಪಡೆಯಸಹಿತ ಪೋಗಿ ನಾ| ಹುಡುಗಿಯನು ಪಿಡಿದು ಹೆಡೆಮುರಿ ಕಟ್ಟಿ| ತಹೆ ನಿನ್ನ ಬಳಿಗೆ||೩||
ಎನುತ ನೇಮವ ಪಡೆದು| ದನುಜ ಸೇನೆಯ ಕೂಡಿ| ರಣಕೆ ಬರೆ ದಾನವನ ಕಂಡು||
ಧನುಜಗಿದಿರಾಗಿ ಅಶ್ವಾರೂಢೆ ವಿಕ್ರಮದಿ| ಮುನಿದು ಪೇಳಿದಳು ಖಳಗಂದು||೪||
||ಮಾರವಿ||ಏಕ||
ದಾನವ ಫಡಬಲು| ಸೇನೆಯನೆರಹಿಸಿ| ಮಾನುನಿಯರೊಳಿಂದು||
ಚೂಣಿಗೈದೆ ಮತಿ| ಹೀನನೆ ಪೌರುಷ| ಕಾಳಿಸೆನ್ನೊಳ್ನಿಂದು||೧||
ಫಡ ಮಾನಿನಿ ಎನ್ನನುಜ ದುರ್ಮದನ| ಮಡುಹಿದವಳ್ಯಾರು||
ಕಡಿದಾಕೆಯ ಶಿರ ರಣದೇವತೆ ಗುಣ| ಬಡಿಸುವೆ ಬರಲಿದಿರು||೨||
ಅನುಜನ ಬಳಿಗಣ್ಣನ ಕಳುಹುವೆನೀ| ಕ್ಷಣ ಧರ್ಮವ ತ್ಯಜಿಸಿ||
ಘನಮದದಿಂದಿಹ ಬಿನುಗು ದೈತ್ಯ ನೋ| ಡನುವರದಲಿ ಸೆಣಸಿ||೩||
ಸೊಕ್ಕಿನ ಹೆಣ್ಣೆ ಪರಾಕ್ರಮವ ನೋಡೀ| ಕ್ಷಣ ನೀನೆಂದು|
ಪಕ್ಕನಿಕ್ಷುಧನುವಿನ ಹೆದೆಯನು ಮುರಿ| ದಿಕ್ಕಿದ ಖಳನಂದು||೪||
ಫಡ ಎನುತಲೆ ಘಡಿ ಘಡಿಸುತ ಶೂಲವ| ದಡಿಗನೆದೆಗೆ ತಿವಿದು||
ಕೆಡವಿ ಪಾಶದಿಂ| ದೊಡನೆ ಬಿಗಿದು ಖಳ| ಗಡಣವರಿದಳಂದು||೫||
||ಸೌರಾಷ್ಟ್ರ||ತ್ರಿವುಡೆ||
ರಣದಿ ಮಡಿದ ಕರಂಡನೆಂಬುದ| ದನುಜನಾಲಿಸಿ ಖತಿಯೊಳುಸುರಿದ|
ಬಿನುಗು ಮಾನಿನಿ ತರಿವುದೇನಿದು| ದನುಜ ಕುಲವ||೧||
ಸಿತಗಳಾಧ್ಯರ ಲೆಕ್ಕಿಸೆನು ಹುಲು| ಸತಿಯು ಗಣ್ಯವೆ ಎನುತ ಕರೆಸಿದ|
ಅನಿತಬಲನಕರಂಕನನು| ಖಳಪತಿಯು ಬಳಿಕ||೨||
ಪುಣ್ಯಜನ ಸಾರ್ವಭೌಮನೆ| ಎನ್ನ ಕರೆಸಿದ ಕಾರ್ಯವೇನದ|
ರನ್ನು ತಿಳುಹಲು ನಡೆಸಿ ಬರುವೆನು| ನಿರ್ಣಯವಿದು||೩||
ತೆರಳಿ ಮೂರಕ್ಷೋಹಿಣಿ ಬಲ| ವೆರಸಿ ಸೇನಾಪತಿಗಳೈವರ|
ತರುಣಿಯನು ಬಂಧಿಸುತ ನೀನೆಳೆತರುವುದೆಂದ||೪||
||ಕೇದಾರ||ಅಷ್ಟ||
ಹೂಂಕರಿಸುತಲೆ ವಿಕ್ರಮದಿ ಸಮರಕೆಕ| ರಂಕಾದಿಗಳು ನಡೆದು||
ಪಂಕಜಮುಖಿಯರ| ಬಂಕ ನಿಲ್ಲಿಸುವೆವು| ಶಂಕಿಸದೆನುತಲಂದು||೧||
ಒಪ್ಪುವ ಮಾಯದಿ| ತಪ್ಪದೆ ಸೃಜಿಸಿದ| ಸರ್ಪಿಣಿ ದೇವತೆಯ||
ಕಪ್ಪು ಬಣ್ಣದೊಳಿರು| ತಿರ್ಪಳ ಕಳುಹಿದ| ಅಪ್ಪಣೆ ಕೊಟ್ಟಾಕೆಯ||೨||
ಹೊರಸೂಸಿ ತನುವಿನಿಂದುರಗಗಳ ಖಳೆಯು| ಗರಳವನುಗುಳುತ್ತಲಿ||
ಮೆರೆವ ತಕ್ಷಕ ಘನ| ತರದ ಕಾರ್ಕೋಟಕಾದ್ಯರು ಕೋಟಿ ಸಂಖ್ಯೆಯಲಿ||೩||
||ಭೈರವಿ||ಅಷ್ಟ||
ತಿಳಿದದ ಖಾತಿಯಲಿ| ದೇವಿಯು| ಬಾಯ| ಒಳಗಿಂದ ಸೃಜಿಸುತಲಿ||
ತಳುವದೆ ನಕುಲೇಶ್ವರಿ| ಯನ್ನಪ್ಪಣೆಯನಿತ್ತು| ಕಳುಹಲು ಶೀಘ್ರದಲಿ||೧||
ಗರುಡನೇರುತಲಿ| ಕುಂದಣದಂತೆ| ಮೆರೆವ ಸೌಂದರ್ಯದಲಿ||
ವರದಂತ ಪಂಕ್ತಿಯು| ಮುಂಗುಸಿಗಳ| ಮೂವತ್ತೆರಡು ಕೋಟಿಯ ಸೃಜಿಸಿ||೨||
ಕಳುಹಲಿಕೈದಿನ ಕುಲಗಳು| ಭುಜಗ ಸಂಕುಲಗಳ ಭಕ್ಷಿಸಲು||
ತಿಳಿದದ ಸರ್ಪಿಣಿ| ಕೊಳುಗುಳಕಿದಿರಾಗಿ| ನಿಲೆ ನಕುಲೇಶ್ವರಿಯು||೩||
ಪಿಡಿದು ಧನುವ ಬರೆ| ನುಡಿದಳು ಸರ್ಪಿಣಿ| ಬೆಡಗನ್ನು ದೋರೆ ನಿನ್ನ||
ಮಡುಹಿದ ಭುಜಂಗರ ಪಡೆಯನು ನಿನ್ನನು| ಬಿಡೆನು ಸಂಹರಿಸದೆ ನಾ ||೪||
ತರಿವ ಸುಭಟಳು ನೀನರಿತಿಹೆ ಕಪಟವ| ಮೆರೆಸು ನಾನದ ನೋಳ್ಪೆನು||
ಧುರದೊಳಗೆನುತಲೆ| ಗರುಡ ಬಾಣದಲಿ ಸಂ| ಹರಿಸಿದಳಾಕೆಯನು||೫||
||ಸೌ||ತ್ರಿವುಡೆ||
ಕಂಡು ಸರ್ಪಿಣಿಯಳಿದುದನು ಖತಿ|
ಗೊಂಡು ಕರಂಕ ಮುಖ್ಯರ ತಂಡನಕುಲೇಶ್ವರಿಯ ಮುಸುಕಿದ| ರಂಡಲೆಯದೆ||೧||
ಬಾಣಗಳನೆಸೆಯುತ್ತ ಶೌರ್ಯದಿ| ಹಾನಿಗೊಳಿಸಲು ಮುಂಗುಸಿಗಳನು|
ಜಾಣೆನಕುಲಾಸ್ತ್ರದಲಿ ಸಕಲರ ಪ್ರಾಣವುಳುಹಿ||೨||
ಮೆರೆಯೆ ಕಂಡು ಕರಂಕ ಪೇಳಿದ|
ಧಿರುರೆ ಮೆಚ್ಚಿದೆ ನಿನ್ನ ಶೌರ್ಯಕೆ| ಪರಿಕಿಸೆನ್ನಧಟೆಂದು ಶರಗಳ ಸುರಿಯಲಾಗ||೩||
ಕಡುಗಲಿಯು ನೀನಹುದೆನುತ್ತಲಿ|
ಕಡಿದಳಾತನ ಶಿರವ ಶರದಿಂ| ಒಡನೆ ಸೇನಾಪತಿಗಳೈವರ| ಪಡೆಯನೆಲ್ಲ||೪||
ಪ್ರೇಮದಿಂ ನಕುಲೇಶ್ವರಿಯನಾ|
ಶ್ಯಾಮಳಾಂಬಿಕೆ ಮೆಚ್ಚಿ ಮನ್ನಿಸಿ| ತಾ ಮುದದಿ ಕೊಡಲಂಗ ದೇವಿಯ ನಾಮವನ್ನು||೫||
||ಶಂಕರಾಭರಣ||ಮಟ್ಟೆ||
ಕಲಹದಲಿ ಕರಂಕಮುಖ್ಯ| ರಳಿದ ವಾರ್ತೆಯನ್ನು ಕೇಳಿ| ತಳೆದು ಕೌತುಕವಿದೇನು| ಘಳಿಗೆಘಳಿಗೆಗೆ||
ಕಲಹದಲಿ ಸೋಲವೆನಗೆ| ಲಲನೆಯನ್ನು ಬಿಡೆನೆನ್ನುತ| ಬಳಿಕಲಾ ಬಲಾಹಕಾದಿ| ಭಟರ ಬರಿಸಿದ ||೧||
ಬಂದರಾಗ ಕೀಕಸೀಯ| ನಂದನರು ಬಲಾಹಕಾದ್ಯ| ರೆಂದರೆರಗೆ ದೈತ್ಯ| ಏತಕಿಂದು ಕರೆಸಿದೆ||
ಚಂದದಿಂದಪ್ಪಣೆಯನಿತ್ತ| ಡಿಂಧುಧರನೆ ಮುನಿಯ ಬಗೆಯ| ದೆಂದು ನಡೆಸಿಕೊಡುವೆವೆನೆನಲಿ| ಕೆಂದನವರಲಿ||೨||
ಕುಂದುಬಂತು ಜಗದಿದೈತ್ಯ| ವೃಂದಕಿಂದು ನಮ್ಮಪುರಕೆ| ಬಂದು ನಾರಿ ದಾನವರನು ಕೊಂದು ಕೆಡಹಲು||
ಮುಂದುವರಿದು ನಿಮ್ಮ ಮಾಯೆ| ಯಿಂದ ಯತ್ನದಲಿ ಪಿಡಿದು ಮ| ದಾಂಧೆಯನ್ನು ಕಟ್ಟಿ ತರುವ| ದೆಂದು ಕಳುಹಿದ||೩||
||ಮಾರವಿ||ಏಕ||
ವಿಕಟಾನನು ವಿಕರ್ಣನು ಸೂಚೀಮುಖನು ಬಲಾಹಕನು|
ಪ್ರಕಟಿಸಿ ಶೌರ್ಯವ ಪಾಲಮುಖನು| ಕರಟಕನು ಕರಾಳಾಕ್ಷ||೧||
ಹದ್ದು ಕಾಗೆ ಕೋಳಿಗಳನ್ನೇರುತ| ಯುದ್ಧಕೆ ಶೌರ್ಯದಲಿ|
ಸಿದ್ಧರಾಗಿ ನಡೆತಂದರು| ಶಿರಕೇರಿರ್ದಹಂಕಾರದಲಿ||೨||
ತರಣಿಯ ಮೆಚ್ಚಿಸಿ ವರಗಳ ಪಡೆದಿರೆ| ದುರುಳರಕ್ಷಿಗಳಲಿ||
ಸ್ಮರಿಸಿದಾಗ ದಿನಕರ ನೆಲಸುವವೋಲ್| ಉರುತರ ಭಕ್ತಿಯಲಿ||೩||
ಮತ್ತೆ ಸ್ಮರಿಸಲುಗಭಸ್ತಿಯು ನೆಲಸಿದ| ದೈತ್ಯರಕ್ಷಿಗಳೊಳು|| ಮಿತ್ರತೇಜದೊಳು ಶಕ್ತಿಸೇನೆ ಭ್ರಮವೆತ್ತು ಮೊರೆಯನಿಡಲು||೪||
ಅರ್ಕನ ತೇಜದಲಿ ಕಂಗೆಡುತಿಹ ಶಕ್ತಿಸೇನೆಯನಿಂದಿಲಿ|
ರಕ್ಷಿಪೆನೆನುತ ಶ್ರೀಲಲಿತಾಂಬೆ ಕಳುಹೆ| ಶಿರಸ್ಕರಿಣೀ ದೇವಿಯ||೫||
ಘನತವೋಲಿತ್ತವೆಂಬ| ವಿಮಾನದಿ ರಣದಿದುರುಳಕದಂಬ|
ವನು ತರಿಯುವೆನೆಂದು| ಫಣಿಶರಗಳನು ಮೋಹನ ಬಾಣಗಳನು ಬಿಡಲು ||೬||
ಅಂಧ ಶರವನೆಸೆದು| ನೀದಾನವ| ವೃಂದವ ತರಿವುದೆಂದು||
ಬಂದು ತಿಳುಹೆ ದಂಡನಾಥೆಯು ನೆರೆ ಖತಿಯಿಂದೆಚ್ಚಳಧಮರನು||೭||
ಎಚ್ಚ ಶರಕೆ ದೈತ್ಯರು| ಕಣ್ಣುಗಳನ್ನು ಮುಚ್ಚಿಬಿಡಿಸದಾದರು||
ಬೆಚ್ಚಿ ಬಲಾಹಕಾದಿಗಳು| ಕಂಗೆಟ್ಟರೆ| ಕೊಚ್ಚಿಕೆಡಹುತಾಗಲು||೮||
ಏಳು ಜನರ ಕಡಿದು ಶಿರಗಳನ್ನು ಮಾಲೆಮಾಡುತ ತಳೆದು||
ಲೀಲೆಯೊಳಿರೆ ದಂಡನಾಥೆ| ಕೊಂಡಾಡಿದಳ್ಬಾಲೆಯ ಮುದದೊಳಂದು||೯||
|| ಸೌರಾಷ್ಟ್ರ || ತ್ರಿವುಡೆ ||
ಧುರದ ವಾರ್ತೆಯನರಿತು ಭಂಡಾ| ಸುರನು ಸೋದರರೀರ್ವರನು|
ಸಚಿವರನು ಕುಟಿಲಾಕ್ಷಧ್ಯರೆಲ್ಲರ| ನೆರಹಿ ನುಡಿದ||೧||
ಬಾಹುಬಲ ತಪಶಕ್ತಿಗಳಿಹ ಬ| ಲಾಹಕಾದಿ ಧುರಂದರರ ನಿಂ|
ದಾಹವದಿ ಮಾನಿನಿಯು ತರಿದಳು| ಸಾಹಸದಲಿ||೨||
ಮಾನಿನಿಯರೊಳು ಸೋತರೆಂಬಪ| ಮಾನವಾಯ್ತೆನಲಾ ವಿಶಂಗನು|
ದಾನವಾಧಿಪನೊಡನೆ ನುಡಿದ ವಿ| ಧಾನಗಳನು||೩||
ಚಿತ್ತವಿಟ್ಟವಧರಿಪುದಣ್ಣನೆ| ಯುಕ್ತಿಯಲಿ ಗೆಲಬೇಕು ಲಲಿತೆಯ|
ಶಕ್ತಿಸೇನೆಯು ಸಮರವೆಸಗುವ | ಹೊತ್ತನೋಡಿ||೪||
ತೆರಳಿ ಬೆಂಗಡೆಯಿಂದಲಾಕೆಯ| ಸೆರೆಪಿಡಿವೆ ಕುಟಿಲಾಕ್ಷ ಮುಂಗಡೆ|
ಧುರಕೆನಿಂದಾ ಶಕ್ತಿಸೇನೆಯ| ತರಿಯುತಿರಲಿ||೫||
|| ಮಾರವಿ || ಏಕ ||
ಎನಲೊಡನುಸುರಿದ | ಮಣಿದಾ ಕುಟಿಲಾ| ಕ್ಷನು ನೀ ಕಳುಹೆನ್ನ ||
ಅನುವರದೊಳಗಾ | ವನಿತಾ ಬಲವನು| ಹನನಗೈದು ಬಹೆನಾ ||೧||
ಹತ್ತಕ್ಷೋಹಿಣಿ | ದೈತ್ಯಬಲವ ಕೂ| ಡುತ್ತ ಖಳಾಧಮನು ||
ಶಕ್ತಿಸೇನೆಯನು | ಮತ್ತತನದಿ ನೆರೆ | ಮುತ್ತಿದ ಬಂದವನು ||೨||
ಕಂಡತಿ ಖತಿಯಲಿ| ದಂಡನಾಥೆ ಒಡ| ಗೊಂಡು ಶ್ಯಾಮಲೆಯನು||
ಕೆಂಡವನುಗುಳುತ | ಹಿಂಡುವೆ ದೈತ್ಯನ| ತಂಡವ ಬಿಡೆನೆಂದು ||೩||
ಎನುತೈತಿರುತಿರೆ| ರಣಕದ ಕುಟಿಲಾಕ್ಷನು ಕಂಡಾಕೆಯನು ||
ವನಿತೆ ನಿಲ್ಲು ರಣದಲಿ| ಶಿರವರಿಯುವೆ| ನೆನುತಲೆ ಪೇಳಿದನು||೪||
ತರಿಯುವೆನೆನ್ನುತ| ರೊರೆದ ಖಳರು ಯಮ| ಪುರವನು ಹೊಕ್ಕಿದರು||
ತೆರಳುವದಲ್ಲಿಗೆ| ನಿನ್ನನು ಕಾಣದೆ | ತರಹರಿಸುವರವರು||೫||
ಅಲ್ಪ ಬಲರ ಗೆಲಿ| ದಿರ್ಪೆನೆನ್ನುತ ಮತಿ| ತಪ್ಪಿನುಡಿವೆ ನೀನು||
ಮುಪ್ಪುರಾಂತಕ ದರ್ಪವ ಸಮದೊ| ಳೊಪ್ಪ ಗೊಡೆನು ನಾನು||೬||
ಕಲಿಗಳೊಳಗೆ ವೇಗ್ಗಳನಾದಲೆ ಕೌಶಲಗಳ ಪರಿಕಿಪೆನು ||
ನಿಲುವದೆನುತ ಕೂ| ರಲಗುಗಳನ್ನೆಸೆ | ಯಲು ಜಾರಿದ ಖಳನು || ೭ ||
|| ಸೌರಾಷ್ಟ್ರ ತ್ರಿವುಡೆ ||
ಮುಂಗಡೆಯೊಳಾತಿ ವಿಕ್ರಮದಿ ಸಮ | ರಾಂಗಣದೊಳಿರೆ ಶಕ್ತಿ ಸೇನೆ ವಿ |
ಶಂಗದಮನಾದಿಗಳ ಕೊಡುತ | ಬೆಂಗಡೆಯಲಿ || ೧ ||
ಗುಪ್ತದಲಿ ನಡೆತಂದ ಚರಣದ ಸಪ್ಪಳಾವು ಕೇಳಿಸದ ತೆರದಲಿ |
ಕಪ್ಪು ಬಣ್ಣದ ಕವಚಗಳ ಧರಿ | ಸೀರ್ಪ ಖಳರು || ೨ ||
ಬಂದು ಬೆಂಗಡೆಯಿಂದ ಮುತ್ತಿದ | ರಂದು ಶ್ರೀಚಕ್ರವನು ಬಾಣಗ|
ಳಿಂದ ಮುಸುಕಲು ಶಕ್ತಿದೇವಿಯ | ರಂದಗೆಟ್ಟು || ೩ ||
ಹಾದಿಗಾಣದೆ ಮೊರೆಯಿಡಲು ಕಡು |
ಕ್ರೋಧದಿಂ ಕಾಮೇಶ್ವರಿಯು ಹದಿನೈದು ದೇವಿಯರೊಡನೆ ಲಲಿತೆಯ ಪಾದಕೆರಗಿ || ೪ ||
|| ಮಾರವಿ ಏಕ ||
ಜನನಿಯೆ ಲಾಲಿಸು ರಣದಲಿ ಸೋತಿಹ | ದನುಜರು ಕಪಟದಲಿ ||
ಘನ ನಿಶಿಯಲಿ ನ | ಮ್ಮನು ಬೆಂಗಡೆಯಲಿ | ಕೆಣಕುವರಿಂದಿನಲಿ || ೧ ||
ಕತ್ತಲೆ ಮುಸುಕಿದೆ ಸತ್ವದಿ ಕಾದುವ |
ಯತ್ನ ತೋರದಿನ್ನು ಶಕ್ತಿಪ್ರದಾಯಕಿ| ಯುಕ್ತಿ ದೋರಿ ಪೊರೆ ಅರ್ತಿಯೊಳೆಮ್ಮವರನು || ೨ ||
|| ಭಾಮಿನಿ ||
ಲಾಲಿಸುತ ಲಲಿತಾಂಬೆ ಧೈರ್ಯವ |
ಪೇಳಿದಳು ಬಿಡಿಭಯವ ಜ್ವಾಲಾ|
ಮಾಲಿನಿಯನಾ ವಹ್ನಿವಾಹಿನಿಯರನು ಕಳುಹುವೆನು||
ಕಾಳಗದೆಡೆಗೆ ತನುಗಳಾ ಮಹಾ |
ಜ್ವಾಲೆಯಲಿ ಕತ್ತಲೆಯು ಸರಿವುದು|
ಖೂಳರನು ಕಡಿದಿಕ್ಕಿ ರೆನ್ನಪ್ಪಣೆಯ ಪಾಲಿಸಲು || ೧ ||
|| ಕಾಂಬೋಧಿ || ಝಂಪೆ ||
ಕಳುಹೆ ಜ್ವಾಲಾಮಲಿನಿಯು ವಹ್ನಿವಾಹಿನಿಯ | ಹೊಳೆದು ದೇದೀಪ್ಯಮಾನದಲಿ||
ಬೆಳಕನೀಯಲು ಶಕ್ತಿದೇವಿಯರು ಶೌರ್ಯದಲಿ |
ಖಳರ ಸಂಹರಿಸುತ ಭರದಲಿ || ೧ ||
ಕೊಂದಳಾಕ್ಷಣ ದಮನ | ನೆಂದೆನುವ ಖಳನ ಭರ | ದಿಂದ ಕಾಮೇಶ್ವರಿಯು ಬಳಿಕ ||
ಮುಂದರಿದು ಭಗಮಾಲಿನಿಯು ದೀರ್ಘ ಜಂಹ್ವಾದಿ ಮಂದಮತಿಗಳನು ತರಿದಿಡಲು || ೨ ||
ರೋಷದಿಂದಲೆ ವಿಶಂಗಾಸುರನು ಘುಡುಘುಡಿಸಿ ||
ತಾ ಸಮರಕನುವಾಗೆ ಬರಲು ||
ಸೂಸಿ ಕಂಗಳಲಿ ಕೆಂಗಿಡಿಯ ದಾನವಗೆ ಕಾಮೇಶ್ವರಿಯು ಶರಗಳಾ | ನೆಸೆಯಲು || ೩ ||
ನುಡಿದನಾ ಖಳದೇವಿಯೊಡನೆ ಬಿಡು ಬಿಡು ನಿನ್ನ | ಬೆಡಗದೋರದಿರೊನ್ನೆಡನೆ ||
ಒಡನೆ ಪಾದಕೆ ಬಂದು | ಪೊಡಮಡಲು ಕಾಯುವೆ ಛಲ|ನಡೆಯದೆನ್ನೊಡನೆ ಕೇಲ್ಜಾಣೆ || ೪ ||
ಸಲಹುವನವನಹುದು ಕ | ತ್ತಲೆಯಲಿ ನಮ್ಮವರನು ಗೆಲುವೆನೆಂದರಿತು ಖಳ ನೀನು ||
ಬಲುಹ ತೋರೆನುತಾ ಶರ | ಗಳ ಸುರಿಯೆ ಪ್ರಾಣವ | ನ್ನುಳುಹಿ ಕೊಂಬೆ | ವೆನುತೋಡಿದನು || ೫ ||
|| ಮೋಹನ || ತ್ರಿವುಡೆ ||
ಇದಿರು ಸಂಗರಕಾಗಿ ನಿಂದಾ | ಮದಮುಖರು ರಾತ್ರಿಯಲಿನೆರೆ ಹಿಂ| ಬದಿಯೊಳಗೆ ಲಲಿತಾಂಬಿಕೆ ಕೆಣಕಿದುದ ಕೇಳಿ || ೧ ||
ಹಂಬಲಿಸುತ ದಂಡ ನಾಥೆಯು | ಅಂಬುಜಾಂಬಕಿ ಶ್ಯಾಮಲಾಂಬೆಯು | ಕಂಬನಿಯೊಳೈತರುವ ಶ್ರೀಲಲಿತಾಂಬೆಗೆರಗಿ || ೨ ||
ಬಳಲಿಸಿದರೇ ತಾಯೆ ಹಾ | ಕಡು ಖಳರು ವಂಚಿಸಿ ಕಷ್ಟಕೊದಗದೆ | ಕುಳಿತ ನಾವಿದ್ದೇನು ಫಲ ಭೂ | ತಳದೊಳಿನ್ನು || ೩ ||
ಅಗ್ನಿಪ್ರಾಕಾರವನು ಬಲಿಯುತ | ಶೀಘ್ರದಲಿ ಶ್ರೀ ಚಕ್ರಕಿನ್ನು ಸ | ಮಗ್ರ ಶತಯೋಜನಕೆ ಕಾವಲ | ನುಗ್ರತರದಿ || ೩ ||
ನಿಲಿಸಿ ರಕ್ಷಿಪೆವೆನುತ ಬಿನ್ನೈಸಲಿಕೆ ಶ್ರೀ | ಲಲಿತಾಂಬೆ ತಾಮನ | ವೊಲಿದು ಜ್ವಾಲಾಮಾಲಿನಿಯು ತಾ | ನುತ್ತಮ ಪ್ರಾಕಾರದಲಿ ನಿಲೆ | ಭಕ್ತಿಯಿಂದ || ೬ ||
|| ಮಾರವಿ || ಏಕ ||
ಸುತ್ತಲು ಪ್ರಾಕಾರವ ಬಲಿಯುತ್ತಲಾ | ಶಕ್ತಿಸೇನೆ ಮೆರೆದ ||
ವಾರ್ತೆಯನಾಲಿಸಿ ಭಂಡಾಸುರ ನಿಜ | ಪುತ್ರರ ಕರೆಯಿಸಲು || ೧ ||
ಜನಕನೆ ಕರೆಸಿಹುದಿನಿತ್ಯಾತಕೆ ಪೇ| ಳನು ಮಾನಿಸದಿನ್ನು |
ಎನಗುಸುರಿದನದ ಕ್ಷಣದಲಿ ನಾ | ಗೈವೆನೆನೆ ಚತುರ್ಬಾಹು || ೨ ||
ಲಲಿತೆ ಎಂಬವಳು ಬಲು ಮಾಯಾಹ್ನಿತೆ | ಅಳಿಸಿದಳೆಮ್ಮವರ |
ಕಲಿಗಳು ನೀವು ರಣದಲಿ ಭಂಗಿಸುತಲೆ | ಎಳೆದು ತರುವದವಳ || ೩ ||
ಅಟ್ಟಿ ಸುಮನಸರ | ಜುಟ್ಟ ಪಿಡಿದು ನೆರೆ | ಕಟ್ಟಿ ತಂದ ಎನಗೆ ||
ದಿಟ್ಟೆಯು ಘನವೆ ತಟ್ಟನೆ ಕಳುಹೆನೆ | ಕೊಟ್ಟಾಜ್ಞೆಯ ನವಗೆ ||| ೪ ||
||ಭೈರವಿ ಅಷ್ಟ ||
ಸಾಹಸದಲಿ ಪೊರಟ | ರಣಕೆ ಚತುರ್ಬಾಹು ಎನ್ನುವ ಸುಭಟ ||
ಆಹವ ಮಲ್ಲರ ನೆರಹಿಸುತಿನ್ನೂರ | ಕ್ಷೋಹಿಣಿ ಬಲಸಹಿತ || ೧ ||
ಕಡಿಹೊಡಿ ಬಡಿರೆನ್ನುತ ಕೋಟೆಯ ಹೊರ | ಗಡೆ ಬಂದು ಗರ್ಜಿಸುತ ||
ಧಡಿಗರು ಮೆರೆಯಲು | ಬಾಲ ಸರಸ್ವತಿ ಒಡನೆ ಮಾತೆಗೆರಗುತ || ೨ ||
ಅಮ್ಮ ಭಂಡನ ಸುತರು | ಕಾಳಗಕೆಂದು | ನಮ್ಮಡೆಗೈದಿಹರು ||
ಘಮ್ಮನೆ ಕಳುಹೆನ್ನ ಸೆಣಸಿ ನಾನೋಡುವೆ | ನೊಮ್ಮೆಗೆ ನಿಂದಿದಿರು || ೩ ||
ಅಂಬಿಕೆಯದಕೆಂದಳು | ಸಂಗ್ರಾಮದ ಹಂಬಲವೇಕೆ ತಾಳು ||
ಒಂಭತ್ತು ವರುಷದ | ನಾಲ್ಕನೆ ಕಣ್ಣಿನ | ಬೊಂಬೆಯಂತಿಹ ಮಗಳು || ೪ ||
ಕಿಡಿಸಣ್ಣದಾದರೇನು | ಪವನ ಸೇರೆ | ಸುಡದೆ ಜಗತಿಯನಿನ್ನು ||
ಬಿಡುಭಯ ನಿನ್ನಾಶೀರ್ವಾದದ ಬಲದಿಂದ | ಮಡುಹುವೆ ದೈತ್ಯರನು || ೫ ||
|| ಮೋಹನ || ತ್ರಿವುಡೆ ||
ಛಲವ ಬಿಡದಿರೆ ಮಗಳ ಮುದ್ದಿಸಿ | ಕಳುಹಲಾಶೀರ್ವದಿಸುತಲೆ ಕಡು |
ಚೆಲುವ ಕವಚಾಯುಧಗಳೀಯುತ | ನಲವಿನಿಂದ ||| ೧ ||
ಏರಿ ಲಘು ಚಕ್ರವನು ಶೌರ್ಯದಿ | ಸಾರುತಿರಲಾ ದಂಡ ನಾಥೆಯು ||
ಭೂರಿ ಭಯದಲಿ ಬಂದು ದೇವಿ | ಕುಮಾರಿಗೆರಗಿ || ೨ ||
ಬಾಲೆ ರಾಜಕುಮಾರಿ ನೀನೇ | ಕಾಳಗಕೆ ತೆರಳುವರೆ | ನಾವಿರೆ |
ತಾಳು ಸಂಗರ ಬೇಡ ನಿನಗೆನೆ | ಕಾಲಿಗೆರಗಿ || ೩ ||
ಸತ್ವಯುತೆ ನೀನಹುದು ಬಲ್ಲೆನು | ವ್ಯರ್ಥ ತಡೆಯದಿರೆಂದು ಶೌರ್ಯದಿ |
ರಕ್ತಮುಖಿಯಾಗುತಲೆ ನಡೆದಳು | ಉತ್ಸಹದಲಿ || ೪ ||
|| ಕಾಂಬೋಧಿ || ಝಂಪೆ ||
ಬಾಲಕಿಯು ಸಮರಕೈತರುವುದನು ಕಂಡು ಖತಿ |
ತಾಳುತಾಕ್ಷಣ ಚತುರ್ಬಾಹು ಕಾಳಗಗೆ ಸನ್ನದನಾಗಿ ಸುರಿಸುತಲೆ ಶರ | ಜಾಲಗಳ ನಿಂತೆಂದನಾಗ || ೧ ||
ಎಳೆಯ ಕುವರಿಯು ನೀನು ಕಲಗವೇನೆಮ್ಮೊಡನೆ | ಸುಲಭವಲ್ಲವು ತಿಳಿದು ಬೇಗ||
ಲಲಿತೆಯೆಂಬವಳನ್ನು ಕಳುಹು ನೀನೆಂದು ಮೂ | ದಲಿಸಲವನೊಡನೆಂದಳಾಗ || ೨ ||
ನೊರಜುಗಳನೊರಸೆ ಮದಕರಿಯೇಕೆ ಮರುಳೆ ಘನ | ಪರಶುವೇತಕೆ ಚಿವುಟೆ ಚಿಗುರ ||
ಧುರದೊಳೆನ್ನನು ಗೆಲದೆ | ಬರಿದೆ ಮಾತೆಯ ಕೇಳ್ವೆ |ಮೆರೆವ ವಿಕ್ರಮವನ್ನೆ ತೋರ || ೩ ||
ಮೂರುಲೋಕಗಳನ್ನೆ | ಗಾರುಗೆಡಿಸಿಹ ನಮ್ಮ | ಪೌರುಷವನೇನರಿವೆ ನೀನು ||
ನಾರಿ ಚಿಕ್ಕವಳೆಂದು | ಸಾರಿದರೆ ಹಿತವ ಮದ | ವೇರಿತೆಂದೆಚ್ಚ ಶರಗಳನು || ೪ ||
ಯುದ್ಧದಲಿ ನಿಪುಣನೈ | ಗೆದ್ದವನು ತ್ರೈಜಗವ | ಬದ್ಧವದನೋಳ್ಪೆನೆಂದೆನುತ ||
ಅರ್ಧ ಚಂದ್ರಾಕಾರದಸ್ತ್ರಗಳನೆಸೆಯುತ್ತ ಮರ್ದಿಸಿದಳೆಲ್ಲ ದಾನವರ || ೫ ||
|| ರೂಪಕ ||
ಪುತ್ರರ ಮರಣವಾರ್ತೆಯನು ಲಾಲಿಸಿ ಭಂಡ | ದೈತ್ಯ ಹಾಯೆಂದು ಹಮ್ಮೈಸಿ ||
ವ್ಯರ್ಥವಾದುದುಯೆನ್ನ ಬಾಳುವೆ ಘನತರ | ಕೀರ್ತಿಯ ತ್ರಿಜಗದಿ ಗಳಿಸಿ || ೧ ||
ಕೊಲಿಸಿದೆ ಮಕ್ಕಳಾ | ಕುಲಕೆ ಕಂಟಕನಾದೆ | ಉಳಿದೆನ್ನ ಮುದ್ದು ಬಾಲಕರ ||
ಇಳೆಯೊಳು ಬಾಳಿಕೊಂಡಿರಲೆಂತು ನಾನಿನ್ನು | ಅಳಿಯಿತು ಸುಖವು ಮಕ್ಕಳಿರ || ೨ ||
ಹಲುಬಿದ ಬಿಚ್ಚಿದ | ತಲೆಯಿಂದ ಹೊರಳಾಡಿ | ಇಳುಹುತ್ತ ಕಂಬನಿಗಳನು ||
ಇಳೆಯೊಳು ಬಿದ್ದು ಹೊ | ರಳುತಡಿಗಡಿಗೆ ತಾ | ತಳೆಯುತ್ತಲಿರ್ದ ಮೂರ್ಛೆಯನು || ೩ ||
|| ಅಷ್ಟ ತಾಳ||
ಈಕ್ಷಿಸುತದ ಕುಟಿಲಾಕ್ಷ| ವಿಷಂಗ ವಿ| ಶುಕ್ರಾದಿದಾನವರು |
ಆಕ್ಷಣ ಪಿಡಿದೆತ್ತಿ ಮಕ್ಕಳಳಿದರೆಂದು | ದುಃಖಿಸಲೇಕೆಂದರು || ೧ ||
ಶೂರತನದಿ ಸುಕುಮಾರರು ಸಂ| ಗರ ಧಾರಿಣಿಯೊಳು ಸೆಣಸಿ |
ವೀರಮರಣವ ನಿಂ | ದೀ ರೀತಿ ಪಡೆದಿರೇ | ಭೂರಿ ಕೀರ್ತಿಯಗಳಿಸಿ || ೨ ||
ತರವಲ್ಲ ನೀನಿಂತು ಮರುಗುವದಿದಕಾಗಿ | ಧರಿಸು ಧೈರ್ಯವ ಮನದಿ |
ತರುಣಿಯು ನಮ್ಮ ಧಿಕ್ಕರಿಸಿ ಮೆರೆಯುವದು ಪರಿಹಾಸ್ಯ ವೀಜಗದಿ || ೩ ||
ಇಂತೆಂದು ನುಡಿಕೇಳಿ | ಚಿಂತೆಯನುಳಿದು ಕೃತಾಂತನಂದದಿ ಘರ್ಜಿಸಿ |
ಕಾಂತೆಯನ್ನರಿದೆನ್ನ ಪಂಥ ಮೆರೆಸುವೆ ಕೃ | ತಾಂತ ಗಾಕೆಯನ್ನೊಪ್ಪಿಸಿ || ೪ ||
|| ಅಷ್ಟತಾಳ ||
ಅಣ್ಣ ನೀನೈದುವುದೇಕೆ | ಭರದಿ ಕಳು | ಹೆನ್ನನು ಸಂಗರಕೆ ||
ಹೆಣ್ಣಿನ ಗರ್ವವ ಮುರಿ | ವೆನೆಂದು ವಿಶುಕ್ರ | ಸನ್ನಹವಾಗಲಿಕೆ || ೧ ||
ತೆರಳೆಂದಪ್ಪಣೆ ಕೊಡಲು | ಮಾಯಕದಿಂದ | ಮರೆಸಿ ತನುವನಾಗಳು ||
ಉರಿಯ ಕೋಟೆಕೆ ಬರೆ ಶಕ್ತಿದೇವಿಯರೊಂದ| ನರಿಯದಾಗಿರುತಿರಲು || ೨ ||
ದ್ವಾರವ ರಕ್ಷಿಸುತ | ಸ್ತಂಭಿನಿ ಮುಖ್ಯ| ನಾರಿಯರಿರೆ ಕಾಣುತ ||
ಭೂರಿ ಪ್ರಕಾರದ ನೇರಲರಿಯದವ | ಚಾರುಮಾಯವ ನೆನೆದ || ೩ ||
ಬಿದ್ದಿರಲೊಂದು ಶಿಲೆ | ನಾಲ್ಕುಮೈಲು ಉದ್ದಗಲಗಳಿಂದಲೆ ||
ಸಿದ್ಧಪಡಿಸಿ ಯಂತ್ರವನ್ನದರಲ್ಲೆಂಟು | ದುರ್ದೇವತೆಗಳನವ || ೪ ||
ತಳುವದಾವಾಹಿಸುತ | ರುಧಿರಮಾಂಸ | ಗಳಾ ಬಲಿಕುಳವನಿತ್ತ |
ಬಳಿಕೆಂಟು ಶೂಲಗಳನು | ಬರೆಯುತ ಕೋಟೆ| ಯೊಳಗದ ಖಳ ಬಿಸುತ || ೫ ||
|| ಮಾರವಿ || ಏಕ ||
ನಿದ್ರಾತಾಂದ್ರ ಕ್ಲೀಬಾ ಕೃಪಣ ಇದ್ದರೆಲ್ಲ ಧೀನಾ |
ದುರ್ದೈವನಿರಹಂಕಾರ ಮಿಲಿಕರು ಸಿದ್ಧಿಸೆ ಯಂತ್ರದೊಳು || ೧ ||
ಕೆಲರಿಗೆ ನಿದ್ರೆಯು | ಕೆಲರಿಗೆ ಮೂರ್ಛೆಯು | ಕೆಲರಿಗೆ ತೂಕಡಿಕೆ |
ಕೆಲರಾಲಸ್ಯದಿ ಕೆಲರು ಷಂಡತನದೊಳಗಿರೆ ಶಕ್ತಿಗಳು || ೨ ||
ನಮಗೇತಕೆ ರಕ್ಕಸ | ರೊಳು ಸುಮ್ಮನೆ | ಸಮರದಗೊಡವೆಯದು ||
ಸುಮನಸರಿಗೆ ಸುಖವಾದರೆ ಫಲವೇನೆಮಗೆಂದರು ಕೆಲರು || ೩ ||
ದೇವಿಯ ಸುಮ್ಮನೆ | ಸೇವಿಸಿ ನಿತ್ಯದಿ| ನಾವು ದಣಿವುದೇಕೆ ||
ಈವಿಧಸಮರದೊಳೆನುತ ಜುಗುಪ್ಸೆಯ | ಭಾವಬಂತು ಬಲಕೆ || ೪ ||
|| ಮೋಹನ || ಅಷ್ಟ ||
ಚಿಂತಿಸಿದರು ದಂಡನಾಥೆ ಮುಖ್ಯರು | ಬಲವಿಂತಾದ ಬಗೆಯೇನಿದು |
ಭ್ರಾಂತಿತಾಳದೆ ಶಕ್ತಿ ಸೇನೆಯೀಪರಿಯಲಿ ಪಂಥ | ಪೌರುಷ ತೊರೆದು || ೧ ||
ಯಾವ ಕಾರಣ ಮಹದೇವಿಯ ನಿರ್ಲಕ್ಷ್ಯ | ಭಾವದಿ ನೋಡುವರೆ ||
ನಾವರಿಯೆವೆನುತ್ತ ಭಯದಿಂದ ಲಾ ಮಹ| ದೇವಿಯ ಮರೆಗೊಂಡರೆ ||2||
ಆ ಮಹಾದೇವಿ ಸರ್ವಜ್ಞಳಾದುದರಿಂದ | ಕಾಮೇಶ್ವರನ ಮೊಗವ|
ಪ್ರೇಮದಿ ನೋಡಿ ನಕ್ಕರೆ ಬಣ್ಣಿಸುವದೇನು | ನಾ ಮಹಾಚೋದಿಗವ || ೩ ||
ಆ ನಗುವಿನ ಪ್ರಕಾಶದಿ ಮಧ್ಯೆಜನಿಸಿದ | ಆನೆಮೊಗದಿ ಮೆರೆವ |
ಮಾನವಾಕಾರದ ಹತ್ತು ಕೈಗಳಿಹ ಗಜಾನನ ಕಡು ಚೆಲುವ || ೪ ||
ತೊಡೆಯೊಳು ಸಿದ್ಧಲಕ್ಷ್ಮಿಯ ಕುಳ್ಳಿರಿಸಿಕೊಂಡು | ಬಿಡದಾಲಿಂಗಿಸಿಕೊಳ್ಳುತ ||
ಪಡೆದನು ಲಕ್ಷ್ಮೀ ಗಣಪತಿಯೆಂಬ ಪೆಸರ | ಪೊಡಮಟ್ಟು ದೇವಿಗಾತ || ೫ ||
ನುಡಿದನು ಮಾತೆನೀ ಪಡೆದಿಹುದೇಕೆನ್ನ | ಮೃಢನ ವದನವ ನೋಡಿ ||
ದೊಡನೆ ನಗೆಯ ಬೀರಿ | ನುಡಿವುದು ಕಾರ್ಯವ | ತಡೆಯದೆ ಕೃಪೆಯ ಬೀರಿ || ೬ ||
ಕಂದಲಾಲಿಸು ಖಳರಿಂದು ಮಾರಣ ಮಂತ್ರ ದಿಂದ ಗೆಲಿದರೆಮ್ಮನು ||
ಕುಂದದೆ ಜಯ ವಿಘ್ನಯಂತ್ರವ ಛೇದಿಸಿ | ಕೊಂಡುಬಾ ದೈತ್ಯರನು || ೭ ||
ಪೊಡಮಟ್ಟು ಜನನಿಗೆ ನಡೆತಂದು ಗಣಪನು | ಪುಡುಕಿತ್ತ ಯಂತ್ರವನು ||
ಒಡನೆ ಝೇಂಕಾರವ ಮಾಡಿದರದ | ರೊಳಗಡಗಿರ್ದ ಸಿದ್ಧಿಗಳು || ೮ ||
ರಣಕೆ ನಿಂದರೆ ಕಂಡು ಗಣನಾಥನೆಲ್ಲರ | ಹನನಗೊಳಿಸಿ ನಿಂದನು |
ಕ್ಷಣದಿ ವಿಕಾರವಳಿದು ಶಕ್ತಿ ದೇವಿಯ ರನುವರಕನುವಾದರು || ೯ ||
|| ಭಾಮಿನಿ ||
ವಾರಣಾಸ್ಯನು ಕರೆಸಿದನು ಪರಿ |
ವಾರಗಳನಾ ಮೋದದುರ್ಮುಖ |
ವೀರವಿಘ್ನ ಪ್ರಮೋದ ಸುಮುಖಿ ಸುವಿಘ್ನಕರ್ತನನು ||
ಆರು ಮಂದಿಗಳನ್ನು ಕೂಡುತ |
ಘೋರ ದೈತ್ಯರ ಬಲವ ಮುತ್ತಲು |
ವೀರನಾದ ವಿಶುಕ್ರನಾಗ ಗಜಾಸುರನ ಕರೆದ || ೧ ||
|| ಮಾರವಿ || ಏಕ ||
ಚಿಕ್ಕೊಡೆಯನೆ| ಏತಕ್ಕೆ ಕರೆಸಿದೆ | ವಿಶುಕ್ರಾಸುರ ನೀನು ||
ಘಕ್ಕನೆಯೆನ್ನಿಂದಹ ಕಾರ್ಯವ ಪೇಳಲ್ಕದ ನಡೆಸುವೆನು || ೧ ||
ಧೀರ ಗಜಾಸುರ ವಾರಣಾಸ್ಯ | ಪರಿ ವಾರವನೊಡಗೊಂಡು ||
ಶೂರತನದಿ ಬಹ | ಸಾರುತವನ ಸಂಹಾರ ಮಾಳ್ಪುದೆಂದು || ೨ ||
ಕರಿವದನನ ಬಿಡು | ಕರಿಗೊರಳನು ಬರೆ | ಧುರದೊಳು ಲೆಕ್ಕಿಸೆನು ||
ಪರಿಕಿಸೆನ್ನುತಲಿ ನೆರಹಿದೈತ್ಯರನು | ಪೊರಟ ಗಜಾಸುರನು || ೩ ||
|| ಭೈರವಿ || ಅಷ್ಟ ||
ಆನೆಮೊಗದಿ ಮೆರೆವ ಪೋರನೆ ವ್ಯರ್ಥ | ಚೂಣಿಗೆ ಬಂದಿರುವ ||
ದೇನು ಮರುಳು ಬಿಡು | ದಾನವರಿಗೆ ನಿನ್ನ | ಪ್ರಾಣ ಕೊಡುವ ಮನವ || ೧ ||
ಪ್ರಾಣವ ತೆಗೆವವರು | ದೈತ್ಯರು ಬಂದು | ಚೂಣಿಗೆ ನಿಂದವರು ||
ಹಾನಿಗೊಂಡೀರ್ಪರನೇಕರು ಡಂಭವ | ನೀನೆಮ್ಮೊಳಾಡದಿರು || ೨ ||
ಎಳ್ಳುಂಡೆ ಕಜ್ಜಾಯವ | ಮೆಲ್ಲುತರಿಂತು | ಡೊಳ್ಳನು ಬೆಳೆಸಿರುವ ||
ಖುಲ್ಲನೆ ಬಗೆವವನಲ್ಲ ಧುರ | ದಲ್ಲಿ ತೋರಿಸು ಶೌರ್ಯವನು || ೩ ||
ಮೆಲ್ಲುವೆ ಕಜ್ಜಾಯವ | ಮುನಿಯಲಿದಿ|ರಿಲ್ಲ ರಣದಿ ದಾನವ |
ನಿಲ್ಲೆಂದು ಶರಬಿಡ | ಲಲ್ಲಿ ಬಿದ್ದನು ಭರ | ದಲ್ಲಿ ನೀ|ಗುತ ಪ್ರಾಣವ || ೪ ||
|| ಭಾಮಿನಿ ||
ಮದಮುಖರ ಸಂಹರಿಸುತಲೆ ಗಜ |
ವದನ ನಡೆತಂದಾಗ ದೇವಿಯ |
ಪದ ಕೆ ವಂದಿಸಿ ನಿಂದಿರಲು ಸಂತಸವ ತಾಳುತಲಿ ||
ಇದು ಮೊದಲು ನೀನಿನ್ನು ತ್ರಿಜಗದಿ |
ಮೊದಲ ಪೂಜೆಯಗೊಂಡು ಭಕ್ತರ |
ಮುದದಿ ರಕ್ಷಿಪುದೆಂದು ವರವಿತ್ತಳು ಮಹಾದೇವಿ || ೧ ||
|| ಸೌರಾಷ್ಟ್ರ || ತ್ರಿವುಡೆ ||
ಧುರದಿ ಮಡಿದ ಗಜಾಸುರನೆನುವ | ದರಿತು ಬಳಿಕ ವಿಶುಕ್ರನಾಕ್ಷಣ |
ಕರೆದು ಪೇಳೆ ವಿಷಂಗಗೆಲ್ಲವ | ಭರದೊಳವನು || ೧ ||
ಚಿತ್ತದೊಳು ಖತಿವೆತ್ತು ತಾ ಬರಿಸುತ್ತಲಾ ಕಚೆತ್ತಾದಿ ವೀರರ ||
ಹತ್ತು ಮಂದಿಗಳನ್ನು ಧೂಮಿನಿ ಪುತ್ರರನ್ನು || ೨ ||
ಸೊಕ್ಕಿರುವ ಗಜಗಳನಡರುತ ವಿ | ಶುಕ್ರನು ವಿಷಂಗಾದಿಗಳು ಸಮ |
ರಕ್ಕೆ ನಡೆದರೆ ಕಂಡುರೋಷದಿ ಶಕ್ತಿ ಸೇನೆ || ೩ ||
ಹಿಂಡುವೆವು ದಾನವರನೆನುತಲೆ | ದಂಡನಾಥೆ ಶ್ಯಾಮಳಾಂಬಿಕೆ |
ಗೊಂಡು ಶಸ್ತ್ರಗಳನ್ನು ಬರೆ ರಣ | ಮಂಡಲಕ್ಕೆ || ೫ ||
|| ವಾರ್ಧಿಕ ||
ಹೋರಾಡಿದಳು ದಂಡನಾಥೆಯು ವಿಷಂಗನಲಿ |
ಧೀರೆ ಶ್ಯಾಮಲೆ ವಿಶುಕ್ರನಲಿ ಭರದೊಳ |
ಶ್ವಾರೂಡೆಯಲ್ಲೂಕಜಿತನೊಡನೆ ಖಳಪುರಸೇನನೆಂಬ ಭಟಗೆ |
ಭೋರನಿದಿರಾಗೆ ಸಂಪತ್ಕರಿಯು ವಿಷನೆಂಬ|
ಘೋರ ದೈತ್ಯನ ನಕುಲೇಶ್ವರಿಯು ಖತಿಯಿಂದ
ಸಾರುತತಿರಸ್ಕರಣಿ ಕುಂತೀ ಸೇನನನು ತುಡುಕುತೀರ್ದರು ಛಲದಲಿ || ೧ ||
|| ನಾದನಾಮ || ಅಷ್ಟ ||
ಗೆಲುವೆನು ಶಕ್ತಿ ಸೇನೆಯನು | ಯುಕ್ತಿಯಲಿ ತಾನೆನುತಲಿ | ವಿಶುಕ್ರದಾನವನು |
ಸೆಳೆದೆಚ್ಚ ತೃಶಾಸ್ತ್ರವನ್ನು ದೇವಿ | ಬಲವು ಬಾಯಾರಿ ಕಂಗೆಡುತಿರುವುದನು || ೧ ||
ಕಂಡು ಶ್ಯಾಮಲೆಯು ಭರದಿ ವರ | ದಂಡನಾಥೆಯ ಕರೆದೆಂದಳಾಕೆಯಲಿ ||
ಪುಂಡನೆಚ್ಚತೃಷಾಸ್ತ್ರದಲಿ | ಭೀತಿ | ಗೊಂಡಿದೆ ಬಾಯಾರಿ ಬಲವು ಶೀಘ್ರದಲಿ || ೨ ||
ಬೇಗ ನಿನ್ನರಥದೊಳಗಿರುವ | ಸುಧಾ | ಸಾಗರನಿಗೆ ನೇಮವಿತ್ತರೆ ಪೊರೆವ ||
ನೀಗಿಸೆ ತೃಷೆಯನ್ನು ಬಲವ | ಲೇಸಾಗಿ ಸುರಿಸುವನಮೃತವರ್ಷವನವ || ೩ ||
ಕರೆಸಿದಳಾ ದಂಡನಾಥೆ | ಆತಗೊರೆದಳು ಲೋಕ ವಿಖ್ಯಾತೆ |
ಸುರಿಸಿನೀನಮೃತ ವರ್ಷವನು | ಪರಿಹರಿಸಿ ತೃಷೆಯ | ರಕ್ಷಿಸೆಮ್ಮ ಸೇನೆಯನು || ೪ ||
ಎನಲು ಹಸಾದವೆಂದವನು | ಬಂಡು | ಕ್ಷಣದಲ್ಲಿ ಸುರಿಸಿದಮೃತಧಾರೆಯನು ||
ಅನಿತ ಸೇವಿಸಿ ಹರುಷವನು | ತಾಳಿ | ಕುಣಿದುದು ಬಲಪಡೆದಧಿಕ ಶಕ್ತಿಯನು || ೫ ||
|| ಮಾರವಿ || ಏಕ ||
ಬಲವತಿಚೇನಗೊಳೆ ಹರುಷದಿ ಶ್ಯಾ| ಮಲೆಯು ವಿಶುಕ್ರನೊಳು||
ಮುಳಿದೆಂದದಳು ಫಡ | ಬಲವ ಬಳಲಿಸಿದ | ಛಲ ತೋರಿಂದಿನೊಳು || ೧ ||
ಗಳಹದಿರೊಮ್ಮೆಗೆ ಗೆಲಿದಿಹೆನೆನುತಲಿ | ಕಲಿಗಳು ದೈತ್ಯರಿಗೆ |
ಲಲನೆಯರೆಣೆಯೆ ಕೊಳುಗುಳದಲಿ ಕೈ | ಚಳಕ ವನೋಡು ಮಿಗೆ || ೨ ||
ದುರ್ಮತಿಯೇ ಬಲು | ಹೆಮ್ಮೆಯಾಡದಿರು ಒಮ್ಮೆಗೆ ನೋಡೆನ್ನ ||
ಬ್ರಹ್ಮಶಿರ ಶರವ | ಮರ್ಮವೆನುತೆಸೆದು | ಸಂಹರಿಸಿದಳವನ || ೩ ||
|| ಭೈರವಿ || ಅಷ್ಟ ||
ಖಾತಿಯೊಳು ವಿಷಂಗನ | ತಡೆದು ದಂಡ | ನಾಥೆ ನುಡಿದಳಾಕ್ಷಣ ||
ಯಾತುಧಾನನೆ ತೋರು ಶೌರ್ಯವ ನಿನ್ನನು | ಘಾತಿಸದೆ ಬಿಡೆನು ನಾ || ೧ ||
ಧಿರುರೆ ಶಭಾಸು ನಾರಿ | ಸಂಗರದೊಳು | ಧರಣಿಯೊಳ್ ಯಾರು ಸರಿ |
ಮರುಳೆ ನಿನಗೆ ಅಲ್ಪ ಬಲ | ರನ್ನು ಗೆಲಿದಿರ್ಪ | ತೆರನಲ್ಲ ನುಡಿದೇ ಸಾರಿ || ೨ ||
ಅಲ್ಪರೆಂತಾಗುವರು | ನುಡಿಗಳಲ್ಲಿ | ದರ್ಪ ತೋರುವ ಖಳರು |
ತಪ್ಪದೆ ನಿಲ್ಲೆಂದು ತರಿದಳು ಗದೆಯಿಂದ | ಅಪ್ಪಳಿಸುತಲವನ || ೩ ||
|| ನಾದನಾಮ || ಅಷ್ಟ ||
ಅನುಜರಳಿದರೆಂಬುದನು ಕೇಳಿ | ಭಂಡ | ದನುಜ ಮನದಿ ಮರುಕವ ತಾಳಿ ||
ಜನ ಪದದೊಳು ಬಿದ್ದು ಹೊರಳಿದ | ಎನ್ನ | ಹಣೆಯ ಬರಹವಿನಿತಾಯ್ತೆಂದ || ೧ ||
ಮೃತ್ಯುಂಜಯನ ವರ ಪಡೆದೆನು ಪುರ | ಮೊತ್ತವ ರಣದಲ್ಲಿ ಗೆಲಿದೆನು |
ಪೃಥ್ವಿ ಮೂರರೊಳು ಕೀರ್ತಿಯ ತಾಳಿ | ಸೋಲವಾಯ್ತೆ ಹಾ ತರುಣಿಯ ಧುರದಲ್ಲಿ || ೨ ||
ಮಾನನೀಗಾಡಿ ಕೊಂಬುದಕ್ಕಿಂತ | ಎನ್ನ | ಪ್ರಾಣವ ಕಳೆದುಕೊಂಬುದು ಹಿತ |
ಏನ ಮಾಡುವುದೆಂದು ನೆರೆನೊಂದು | ದಾನವ | ಕೆದರಿದ ತಲೆಯಿಂದ || ೩ ||
|| ಸೌರಾಷ್ಟ್ರ || ತ್ರಿವುಡೆ ||
ಅರರೆ ತಪ್ಪಾಯ್ತೆನುತ ಚಿಂತೆಯ |
ತೊರೆದು ಖಳನಾನಿಂದು ತರುಣಿಯ |
ತರಿಯದಿರೆನೆಂದೆನುತ ದಾನವ | ರೆರೆಯನಂದು || ೧ ||
ಕರೆಸಿ ಕುಟಿಲಾಕ್ಷಾದಿ ದೈತ್ಯರ
ನೆರವಿಯನ್ನುಳಿದೀರ್ಪ ಬಲಸಹ |
ಭರದೊಳೇರಿ ಅಖಿಲ ರಥವನು | ಧುರಕೆ ಪೊರಟ || ೨ ||
ಒಂದು ಸಾವಿರ ಕೇಸರಿಗಳನು |
ಬಂಧಿಸಿರಲಾರ ಈಕೆ ದೈತ್ಯರ |
ವೃಂದ ಬೊಬ್ಬಿರಿಯಲಿಕೆ ಸಮರಕೆ | ನಿಂದನಾಗ || ೩ ||
ಖಳನು ಧುರಕೈತರುವ ಹದನವ
ತಿಳಿದು ಶ್ರೀ ಲಲಿತಾಂಬೆ ತಾನೇ |
ಕೊಳುಗುಳಗೆ ಸನ್ನದ್ಧಳಾದಳು| ನಲವಿಂದ || ೪ ||
ನಿಗಮಗಳು ಚಕ್ರಗಳು ಪುರುಷಾ
ರ್ಥಗಳು ಹಯಗಳು ರಥಕೆ ಅಂತ
ಸ್ತುಗಳು ಒಂಭತ್ತರಲಿ ದೇವಿಯರುಗಳ ಕೂಡಿ || ೫ ||
ಮಾತೆಯೇರಿದಳು ಮೆರೆವ ವ |
ರೂಥ ಶ್ರೀ ಚಕ್ರವನು ದಂಡ
ನಿನಾಥೆ ಮುಖ್ಯರ ನಾಯುಧಗಳ ಸ | ಮೇತ ಮುದದಿ || ೬ ||
ಸುಮನಸರು ಜಯವೆಂದು ಸುರಿಸಲು |
ಸುಮದ ಮಳೆಯನು ದಂಡನಾಥೆಯು ಕುಮತಿ ಕುಟಿಲಾಕ್ಷಾದಿಗಳೊಡನೆ | ಸಮರಕೈದೆ || ೭ ||
|| ಭೈರವಿ || ಅಷ್ಟ ||
ಲಲಿತೆಯೆಂಬವಳು ಯಾರೆ | ದೈತ್ಯರ ಕುಲ | ಕೊಲಿಸಿದವಳನು ತೋರೆ ||
ತಳೆದಿಹ ಗರ್ವವ | ನಿಳುಹುವೆ ನಿಮಿಷದಿ | ಕಲಹಕೆನ್ನಲಿ ನಿಂದರೆ || ೧ ||
ಇದಿರು ನಿಂದೀರ್ಪವಳಾ | ಜೈಸದೆ ಸುಮ್ಮ | ನೊದರುವದೇಕೆ ಖಳ ||
ಇದಿರೆ ತೃಣವು ಕಲ್ಪಾಂತದ ಕಿಚ್ಚಿಗಿನ್ನುಧಿಕ ಸಮರ ಕೌಶಲ || ೨ ||
ಕುಟಿಲತನದ ಯುದ್ಧದಿ | ಮೆರೆವ ದೈತ್ಯ | ಕಟಕವರಿದ ಗರ್ವದಿ ||
ಕುಟಿಲಾಕ್ಷನಲಿ ನಿಲೆ | ಘಟಿಕೆಯೊಳ್ ಗೆಲುವೆ ಸಂ | ಘಟಿಸಿಹ ಸಂಗರದಿ |
ಕಪಟ ಮಾರಣಗಳಲಿ | ದಾನವರೆಲ್ಲ | ನಿಪುಣರು ಸಮರದಲಿ|
ವಿಪರೀತ ನುಡಿಗಳೇ ಕೆಂದೆಚ್ಚು | ತರಿದಳು | ಅಪರಿಮಿತ ಖಳರನ್ನು || ೪ ||
|| ಮಾರವಿ || ಏಕ ||
ಕಂಡನು ಬಲವಳಿದುದನು | ಖತಿ | ಗೊಂಡಾ ಭಂಡಾಸುರನು ||
ಖಂಡ ಪರಶುವಿನ ತೆರದಿ | ರಣ | ಮಂಡಲಗೈತರೆ ಛಲದಿ || ೧ ||
ಕಾಣುತದನು ಲಲಿತಾಂಬೆ | ಫಡ | ದಾನವನಸುವನು ಗೊಂಬೆ ||
ತಾನೆನುತಲೆ ನಡೆತರಲು | ವರ | ಚೂಣಿಗೊರೆದ ದೇವಿಯೊಳು || ೨ ||
|| ಮಟ್ಟೆ ತಾಳ ||
ನಾರಿ ನೀನೆ ಕಲಹವೇನೆ | ಮೂರುಲೋಕಾಧೀಶನೊಡನೆ ||
ಯಾರು ನಿನ್ನ ಕಾಯ್ದ ಭಟರು | ತೋರು ಬೇಗನೆ || ೧ ||
ಮೂರುಲೋಕದೊಡೆತನಗಳ | ಯಾರು ನಿನಗಿತ್ತವರು ಖೂಳ |
ಸೇರಿ ಎನ್ನ ಮರೆಯ ಬಾಳು | ಧಾರಿಣಿಯೊಳು || ೨ ||
ಚಿತ್ತಜಾರಿ ವರದೊಳರ್ಧ | ಶಕ್ತಿ ಬರುವುದಿದಿರುನಿಂದ |
ವ್ಯಕ್ತಿಯಿಂದ ಗೆಲಿದೆ ನಾನು | ಪೃಥ್ವಿ ಮೂರನು || ೫ ||
ಸತ್ವಶಾಲಿ ಯಾಗಿರಲ್ಕೆ | ದೈತ್ಯ ಬಲವ ಕೊಲಿಸಿದೇಕೆ |
ವ್ಯರ್ಥ ನಾರಿಯರ ಕೈಯಿಂದ | ಧೂರ್ತ ದಾನವ || ೬ ||
ಹರಿಹರ ಬ್ರಹ್ಮಾದ್ಯರೆಲ್ಲ | ತರಹರದೊಳಿಹರು ಸುಳ್ಳಲ್ಲ ||
ಬರಿದೆ ಸಾಯಲೇಕೆ ಕೈವೆ | ಮರೆಯಗೊಂಡರೆ || ೩ ||
ಹರಿಹರಾದಿ ಸೃಷ್ಟಿಯೆಲ್ಲ | ಮರುಳೆಯೆನ್ನಿಂದಾದ ಸೊಲ್ಲ ||
ನರಿಯೊಪರಂಜ್ಯೋತಿ ಜ್ಞಾನ | ಶಕ್ತಿ ಎಂಬುದ || ೪ ||
|| ಸೌರಾಷ್ಟ್ರ || ತ್ರಿವುಡೆ ||
ವೆತ್ತು ಖಾತಿಯ ದೇವಿ ವಚನದಿ | ದೈತ್ಯನಾಕ್ಷಣ ಅಂಧತಾಮಿ |
ಶ್ರಾಸ್ತ್ರ ಬಿಡೆ ಕತ್ತರಿಸಲು ಮಹಾ | ಮಿತ್ರ ಶರದಿ || ೧ ||
ಒಡನೆ ಪಾಖಂಡಾಸ್ತ್ರವನು ಬಿಡೆ ಧಡಿಗನದ ಗಾಯತ್ರಿ ಶರದಲಿ |
ಕಡಿದಳು ಮಹಾದೇವಿ ಯಾಕ್ಷಣ | ಘುಡುಘುಡಿಸುತ || ೨ ||
ಖಳಾ ಮಹಾರೋಗಾಸ್ತ್ರವನು ಬಿಡೆ | ತಿಳಿದು ನಾಮತ್ರಯದ ಶರದಲಿ ||
ಗೆಲಿದು ನಿಂದಳು ದೇವಿ ರೋಷವ | ತಳೆದು ದನುಜ || ೩ ||
ಒಡನೆ ಬಿಡಲು ಮಹಾಸುರಾಸ್ತ್ರವ | ಮಡಿದ ಮಹಿಷನು ಶುಂಭ ಮುಖ್ಯರಗಡನ ನಡೆತರೆ |
ರಣಕೆ ದೇವಿಯು ಘುಡುಘುಡಿಸುತ || ೪ ||
ಅಟ್ಟಹಾಸವ ಮಾಡಲದರಿಂ | ಹುಟ್ಟಿ ದುರ್ಗಾಂಬಿಕೆಯು ಸಿಂಹವ |
ತಟ್ಟನೇರುತ ಬಂದು ದೈತ್ಯರ | ಕುಟ್ಟಿ ಕೆಡಹೆ || ೫ ||
|| ವಾರ್ಧಿಕ ||
ಒಲಿದು ಪರಮೇಶ್ವರನು ಕೊಟ್ಟೀರ್ಪ ವರಬಲದಿ |
ಖಳನು ಸೃಜಿಸಿದನು ತಾ ಹಿರಣ್ಯಕ ದೈತ್ಯ |
ಬಳಗವನ್ನಳಿದವರ ಕಳುಹೆ ಸಂಗರಕೆ ಶ್ರೀದೇವಿಯದನು ತಿಳಿದು ||
ಗಳಿಗೆಯಲಿ ಚಿಮ್ಮುತ ಹತ್ತು ಬೆರಳುಗಳ |
ಸೃಜಿಸಲಿಕೆ ಶ್ರೀಹರಿಯ ಮತ್ಸ್ಯಾದಿ ಅವತಾರಗಳ |
ಖಳನ ಸೃಷ್ಟಿಯ ಕೊಲಲು ಪ್ರತಿಕಲ್ಪಗಳಲಿ ಸಂಜನಿಪುದೆನುತವರಿಗೆ || ೧ ||
|| ಕಂದ ||
ಹತ್ತವತಾರಗಳಿಗೆ ತಾ | ನಿತ್ತು ಮಹಾದೇವಿ ನೇಮವನ್ನೀ ತೆರದಿಂ ||
ಅರ್ತಿಯೊಳೆಲ್ಲವರಂ | ಕಳುಹುತ್ತಲೆ ಭಂಡಾಸುರನನು ಕಂಡಿಂತೊರೆದಳ್ || ೧ ||
|| ಮೋಹನ || ತ್ರಿವುಡೆ ||
ಎಲವೋ ಭಂಡಾಸುರನೆ ಸಂಗರ |
ಕಲಿಯು ನೀನಹುದೆಂದು ಮೆಚ್ಚಿದೆ |
ತಿಳಿದಿಹೆನು ಸುಜ್ಞಾನಿ ನೀನೆಂದಿಳೆಯೊಳಿನ್ನು || ೧ ||
ಹತ್ತುಸಾವಿರ ವರುಷ ತಪವೆಸ|
ಗುತ್ತ ಪರಮೇಶ್ವರನ ಮೆಚ್ಚಿಸಿ
ಉತ್ತಮ ವರಗಳನ್ನು ಪಡೆದಿಹ ಸತ್ತ್ವಶಾಲಿ || ೨ ||
ಗಿರಿಜೆ ಶುಕ್ರಾಚಾರ್ಯ ಮುಖ್ಯರು |
ಅರುಹಿದರೆ ನೀತಿಗಳ ನೆರೆಧಿ |
ಕ್ಕರಿಸಿ ದುಷ್ಟರ ಸಂಗದಲಿ ನೀ ಧರಣಿಗಳನು || ೩ ||
ವ್ಯರ್ಥ ಪೀಡಿಸುತಿರುವುದುಚಿತವೆ|
ಇತ್ತು ನಾಕವ ತ್ರಿದಶರಿಗೆ ಮೆರೆಯುತ್ತಿರಲು |
ಶೂನ್ಯಕದಿ ಪಾಲಿಪೆ ನಿತ್ಯ ನಿನ್ನ || ೪ ||
ಎನಲು ಮಣಿದೊಡನೆಂದ ತ್ರಿಜಗ |
ಜ್ಜನನಿ ತವಘನ ವಚನ ಸುಧೆಯದು |
ಒಣಗಿರುವ ಸುಜ್ಞಾನವನು ಚೇ | ತನಗೊಳಿಸಿತು || ೫ ||
ಹರಿದುದೆನ್ನಯ ದುರಿತ |
ಪೂರ್ವಸ್ಮರಣೆ ತಳೆದೆನು ತಾಯೆ ನೀನವ |
ಧರಿಸು ಬಿನ್ನಪವಿದನು ಬೀರುತ ಕರುಣೆಯನ್ನು || ೬ ||
|| ವಾರ್ಧಿಕ ||
ಪೂರ್ವಜನ್ಮದಲಿಮಾ ಣಿಕ್ಯಶೇ ಖರನೆಂಬ |
ದೇವತೆಯುನಾ ಶ್ರೀ ಮಹಾರಮಾದೇವಿಯಲಿ |
ಸೇವೆಯಿಂದಿರುತಿರಲು ಒಂದುದಿನ ಗಂಗಾನದಿ ತೀರದೆಡೆಗೆ ತೆರಳಿ ||
ಕಾವಲಿಗೆ ನಿಲಿಸುತೆನ್ನನು ತಪವನೆಸಗುತಿರೆ |
ದೇವಿ ಕಿನ್ನರ ತರುಣಿಯೋರ್ವಳೈತರುತಲಾ |
ಪಾವನನದಿಯೊಳ್ ಮೀಯುತಿಹ
ವೇಳ್ಯದಲಿ ಸುಳಿಗೆ ಮೊರೆಯಿಡುವ ಧ್ವನಿಯ ಕೇಳಿ || ೧ ||
ಜಡಜನೇತ್ರೆಯ ಪೊರೆಯಲೆನುತಲೆ |
ವಡನೆ ನದಿಯಲಿ ಧುಮುಕಿ ನಾರಿಯ|
ದಡವ ಸೇರಿಸಲವಳ ರೂಪವ ಕಂಡು ಮೋಹದಲಿ ||
ಮಡದಿಯಾಗೆಂದರಿಕೆ ಗೈದರೆ |
ಧೃಢದಿ ಪೊರೆದವ ಜನಕಗೆಣೆ ನೀ |
ಬಿಡು ಮನದ ಬಯಕೆಗಳನೆನುತಲೆ ಪೇಳೆ ನೀತಿಗಳಾ || ೧ ||
ನುಡಿಯನಾ ಧಿಕ್ಕರಿಸಿ ಮೋಹದಿ |
ಪಿಡಿಯೆ ಸೆರಗನು ಭೀತಿಯಲಿ ಮೊರೆ
ಯಿಡಲು ತರುಣಿಯು ಕೇಳಿ ಲಕ್ಷ್ಮೀ ದೇವಿ ಕೋಪದಲಿ ||
ಪೊಡವಿಯಲಿ ಕಡುದೈತ್ಯ ನಾಗೆಂ |
ದೊಡನೆ ಶಪಿಸಲು ನಡುಗಿ ಭಯದಲಿ |
ಪೊಡಮಡುತ ಮರುಗಲಿಕೆ ಕರುಣವದೋರಿ ಶ್ರೀದೇವಿ || ೨ ||
|| ಕಂದ ||
ಪರಮ ಪತಿವ್ರತೆಯನ್ನೀ |
ಪೊರೆದಿಹ ಕಾರಣದಿ ನಿನಗೆ ಶ್ರೀಲಲಿತಾಂಬಾ ||
ಚರಣದೆಡೆಯೊಳಗೆ ಮುಕ್ತಿಯು ||
ದೊರಕುವದೆಂದಭಯವಿತ್ತಳೊಲಿದೀ ತೆರದಿಂ || ೧ ||
|| ಸಾವೇರಿ || ರೂಪಕ ||
ಇತ್ತಡಾ ಸಾಗರ ಪುತ್ರಿಯಭಯವನ್ನು |ದೈತ್ಯ ನಾನಾದೆ ನೀ ತೆರದಿ ||
ಅರ್ತಿಯಿಂದಲೆ ದಿವ್ಯ ಮೂರ್ತಿಯ ಕಂಡು |ಕೃತಾರ್ಥನಾಗಿಹೆನಿಂದು ಜಗದಿ || ೧ ||
ಜನನಿ ಬಿನ್ನಪ ಪಾದ | ವನಜ ವೀಕ್ಷಿಸಿದೆನ್ನ | ಜನಪದದಲಿ ಹುಟ್ಟದಂತೆ||
ಮಣಿದ್ವೀಪವಾಸ ವ | ನೆನಗೆನ್ನ ಹೊಂದಿರ್ಪ ದನುಜರಿಗಿತ್ತು ರಕ್ಷಿಪುದು || ೨ ||
ಎಂದು ಭಕ್ತಿಯೊಳಾಡಿ ವಂದಿಸಿ ಸಮರಕೆ | ನಿಂದಿರೆ ಶ್ರೀಲಲಿತಾಂಬೆ |
ಚಂದದಿ ಕಾಮೇಶ್ವರಾಸ್ತ್ರದಿ ತರಿಯಲು | ಅಂದು ಮಥಿಸುತಲೆ ಶಿರವು || ೩ ||
ವದಗಿನಿಂದಲಿ ದೇವಿ | ಪದತಳದಲಿ ಬೀಳೆ | ವಧಿಸಿತೆಲ್ಲರ ದೇವಿ ಶರವು ||
ವದಗಿನಿಂದಾತ್ಮವು ಮುಕ್ತಿಯ ಸೇರಿತು | ತ್ರಿದಶರು ಜಯಜಯವೆನಲು || ೪ ||
|| ವಾರ್ಧಿಕ ||
ಪಡೆದರಾ ದಾನವರು ಮುಕ್ತಿಪದಸಂಪದವ ಸುರ |
ಗಡಣ ಶ್ರೀದೇವಿಯಂ ಪೂಜಿಸುತ ನುತಿಸಿದರೆ |
ಕೊಡುತ ಭಯವಂ ಶಕ್ತಿಸೇನೆಯಂ ಮನ್ನಿಸಲು ಹರಿಹರ ಬ್ರಹ್ಮರೈದಿ ||
ಧೃಡಮನದೊಳಡಿಗೆರಗೆ ಕಡು ಕರುಣದಿಂದ ಭಯ |
ಕೊಡುತವರ ಸಂತೈಸಿ ಪರಮ ಸಂತಸದಿಂದ |
ಪಡೆದಳಂತರ್ಧಾನಮಂ ಮಣಿ ದ್ವೀಪದಲಿ ನೆಲೆಯಾದಳೆಂಬ ತೆರದಿ || ೧ ||
|| ಕಂದ ||
ಮಂಗಳಮಂ ಪಾಲಿಸು ದಿ | ವ್ಯಾಂಘ್ರಿಯ ಸಂಸ್ತುತಿಪ ಭಕ್ತ ಜನ ಕರ ತಾಯೆ ||
ಗಂಗಾಧರ ಪುರಹರನ | ರ್ಧಾಂಗಿಯೆ ನಾ ಮಣಿದು ಬೇಡಿಕೊಂಬೆನು ಪದದೊಳ್ || ೧ ||
ಮಂಗಲಂ

No comments:
Post a Comment